ಮನೆ ಸುದ್ದಿ ಜಾಲ 20,000 ಟನ್ ಎಲ್‌ಪಿಜಿ ಗ್ಯಾಸ್ ಹೊತ್ತ ಟ್ಯಾಂಕರ್ ಹಡಗು ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ ತಲುಪಿದೆ

20,000 ಟನ್ ಎಲ್‌ಪಿಜಿ ಗ್ಯಾಸ್ ಹೊತ್ತ ಟ್ಯಾಂಕರ್ ಹಡಗು ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ ತಲುಪಿದೆ

0

ಹೊಸದಿಲ್ಲಿ : ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಸುಮಾರು 20,000 ಟನ್ ಎಲ್ ಪಿಜಿ ಹೊತ್ತ ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಬೃಹತ್ ಟ್ಯಾಂಕ‌ರ್ ಹಡಗು ಸುರಕ್ಷಿತವಾಗಿ ಭಾರತವನ್ನು ತಲುಪಿದೆ. ಈ ಹಡಗು ಗುಜರಾತ್‌ನ ಕಚ್ ಜಿಲ್ಲೆಯ ಕಾಂಡ್ಲಾ ಬಂದರಿಗೆ ಯಶಸ್ವಿಯಾಗಿ ಬಂದು ತಲುಪಿದ್ದು  “ಸೈಮಿ” ಎಂದು ಗುರುತಿಸಲಾದ ಈ ಎಲ್‌ಪಿಜಿ ಟ್ಯಾಂಕ‌ರ್ ಹಡಗು, ಜಾಗತಿಕವಾಗಿ ಅತ್ಯಂತ ಸಂವೇದನಾಶೀಲ ಮತ್ತು ಆಯಕಟ್ಟಿನ ಪ್ರದೇಶವೆಂದು ಪರಿಗಣಿಸಲಾದ ‘ಹಾರ್ಮುಜ್ ಜಲಸಂಧಿ’ಯನ್ನು ಮೇ 13 ರಂದು ಯಶಸ್ವಿಯಾಗಿ ದಾಟಿ ಭಾರತೀಯ ಬಂದರಿನತ್ತ ಬಂದಿತ್ತು. ಪರ್ಷಿಯನ್ ಗಲ್ಫ್ ಅನ್ನು ಅಂತರರಾಷ್ಟ್ರೀಯ ಹಡಗು ಮಾರ್ಗಗಳೊಂದಿಗೆ ಸಂಪರ್ಕಿಸುವ ಹಾರ್ಮುಜ್ ಜಲಸಂಧಿಯ ಮೇಲೆ ಸದ್ಯ ಜಾಗ° ಮಟ್ಟದಲ್ಲಿ ತೀವ್ರ ನಿಗಾ ಇಡಲಾಗಿದ್ದು, ಈ ಹಾದಿಯ ಮೂಲಕ ಇಂಧನ ಸಾಗಾಟ ಮಾಡುವುದು ಸವಾಲಿನ ಕೆಲಸವಾಗಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ, ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ನಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ, “ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳುವುದು ಇರಾನ್‌ನ ಐತಿಹಾಸಿಕ ಕರ್ತವ್ಯವಾಗಿದೆ. ಇರಾನ್ ಎಲ್ಲಾ ಸ್ನೇಹಪರ ರಾಷ್ಟ್ರಗಳ ನಂಬಿಕಸ್ಥ ಪಾಲುದಾರನಾಗಿದ್ದು, ವಾಣಿಜ್ಯ ಸುರಕ್ಷತೆಯ ವಿಷಯದಲ್ಲಿ ಭಾರತವು ಇರಾನ್ ಅನ್ನು ಸಂಪೂರ್ಣವಾಗಿ ನಂಬಬಹುದು” ಎಂದು ಅರಾಗ್ನಿ ಭರವಸೆ ನೀಡಿದ್ದರು. ಈ ಸುರಕ್ಷಿತ ಇಂಧನ ಪೂರೈಕೆಯು ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ಮತ್ತು ಎಲ್‌ಪಿಜಿ ಕೊರತೆಯಾಗದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದ ಅಮೆರಿಕ – ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಮತ್ತು ಇಂಧನ ಪೂರೈ ಮಾರ್ಗಗಳು ಸ್ಥಗಿತಗೊಂಡಿರುವುದರಿಂದ ಇಂಧನ ಬಿಕ್ಕಟ್ಟು ಎದುರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಉಲ್ಲೇಖಿಸಿದ್ದು, ನಾಗರಿಕರು ಇಂಧನವನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕ ವಲಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡ‌ರ್ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿವೆ. 19 ಕೆಜಿ ರೀಫಿಲ್ ಸಿಲಿಂಡರ್ ಬೆಲೆಯನ್ನು ₹993 ಮತ್ತು 5 ಕೆಜಿ ಸಿಲಿಂಡ‌ರ್ ಬೆಲೆಯನ್ನು ₹261.50 ರಷ್ಟು ಹೆಚ್ಚಿಸಲಾಗಿದ್ದು, ಇದರಿಂದಾಗಿ ವಲಸೆ ಕಾರ್ಮಿಕರು, ಸಮುದಾಯ ಅಡುಗೆ ಮನೆಗಳು ಕ್ಯಾಂಟೀನ್‌ಗಳು, ರಸ್ತೆ ಬದಿಯ ಧಾಬಾಗಳು ಮತ್ತು ಕೈಗಾರಿಕಾ ಬಳಕೆದಾರರ ಇಂಧನ ವೆಚ್ಚ ಶೇಕಡಾ 47 ಕ್ಕಿಂತ ಹೆಚ್ಚು ದುಬಾರಿಯಾಗಿದೆ. ಈ ಕಠಿಣ ಜಾಗತಿಕ ಸನ್ನಿವೇಶದ ಮಧ್ಯೆಯೂ 20,000 ಟನ್ ಗ್ಯಾಸ್‌ ಹೊತ್ತ ಹಡಗು ಭಾರತಕ್ಕೆ ಬಂದಿರುವುದು ಸದ್ಯದ ಪರಿಸ್ಥಿತಿಯಲ್ಲಿ ಸಮಾಧಾನಕರ ಸಂಗತಿಯಾಗಿದೆ ಎನ್ನಲಾಗಿದೆ.