ಜೈಪುರ: ರಾಜಸ್ಥಾನದ ಅಜೇರ್ ಜಿಲ್ಲೆಯಲ್ಲಿ ಗಗವಾನಾ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಈ ಘಟನೆಯು ಶನಿವಾರ ನಡೆದಿದೆ. ಸಂತ್ರಸ್ತ ವ್ಯಕ್ತಿಯನ್ನು ಜೀತು (21) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು ಎನ್ನಲಾಗಿದೆ.
ಈ ಕುರಿತು ಐದು ತಿಂಗಳ ಹಿಂದೆ ವಿಚ್ಛೇದನ ಪಡೆದು ಪೋಷಕರ ಮನೆಯಲ್ಲಿದ್ದ ಮಹಿಳೆಯನ್ನು ಜೀತು ವಿವಾಹವಾಗಿದ್ದರು. ಈ ವಿವಾಹಕ್ಕೆ ಮಹಿಳೆಯ ಮಾಜಿ ಅತ್ತೆ-ಮಾವ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿವಾದ ಮುಂದುವರಿದಿತ್ತು. ಮಹಿಳೆಯ ಮಾಜಿ ಅತ್ತೆ-ಮಾವ ಜೀತುವನ್ನು ಅಪಹರಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಶೂ ಮತ್ತು ಚಪ್ಪಲಿಗಳ ಹಾರವನ್ನು ಧರಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಮೂತ್ರ ಕುಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಆಕ್ರೋಶ ವ್ಯಕ್ತವಾಗಿದೆ. ಜೀತು ಕುಟುಂಬಸ್ಥರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಸಂಜೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇತರ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

















