ಮೈಸೂರು : ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಈಗಾಗಲೇ ಮೈಸೂರಿನ ಜನತೆ ತತ್ತರಿಸಿದ್ದು, ಈ ನಡುವೆ ಮೈಸೂರು ಮಹಾನಗರ ಪಾಲಿಕೆ ನಗರದಲ್ಲಿ ಸಂಚರಿಸುವ ವಾಹನಗಳಿಗೆ ತೆರಿಗೆ, ನೀರಿನ ದರ ಹೆಚ್ಚಳ ಸೇರಿದಂತೆ ಉದ್ದಿಮೆ ತ್ಯಾಜ್ಯ ನಿರ್ವಹಣೆಗೂ ಶುಲ್ಕ ವಿಧಿಸುವ ಮೂಲಕ ಜನರಿಗೆ ತ್ರಿವಳಿ ಶಾಕ್ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ(ಏ.1) ಈ ಹೊಸ ಆರ್ಥಿಕ ಹೊರೆ ಜನರ ಮೇಲೆ ಬೀಳಲಿದ್ದು, ಈ 3 ಆದಾಯದ ಮೂಲಕ ಪಾಲಿಕೆ ತನ್ನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳು ನಿರ್ಧರಿಸಿದೆ. ಪಾಲಿಕೆಯ ಈ ತ್ರಿವಳಿ ತೆರಿಗೆ ವಸೂಲಿ ಸೂತ್ರ ಜನರನ್ನು ಕಂಗೆಡಿಸಿದೆ.
ನಗರದಲ್ಲಿ ಸಂಚರಿಸುವ ವಾಹನಗಳಿಗೂ ತೆರಿಗೆ – ಆಸ್ತಿ ತೆರಿಗೆಯೊಂದಿಗೆ ಮೈಸೂರು ಮಹಾ ನಗರ ಪಾಲಿಕೆಯು ವಾಹನ ತೆರಿಗೆಯನ್ನು ಸಹ ವಿಧಿಸಲು ಮುಂದಾಗಿದೆ. ಮುಂದಿನ ಆರ್ಥಿಕ ವರ್ಷದಿಂದ ಈ ನಿಯಮವನ್ನು ಜಾರಿಗೊಳಿಸುತ್ತಿರುವ ಪಾಲಿಕೆಯು, ಸಾರ್ವಜನಿಕರು ಬಳಸಲು ವಾಹನಕ್ಕೂ ಸಹ ಪ್ರತ್ಯೇಕವಾಗಿ ತೆರಿಗೆ ವಿಧಿಸಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆಯ ಆಸ್ತಿ ಗುರುತಿನ ಸಂಖ್ಯೆಯ ಆಧಾರದ ಮೇಲೆ ವಾಹನಗಳಿಗೆ ತೆರಿಗೆ ಇರಲಿದೆ. ದ್ವಿಚಕ್ರ ವಾಹನಕ್ಕೆ 100 ರೂ. ತ್ರಿ ಚಕ್ರ ವಾಹನಕ್ಕೆ 300 ರೂ. ಹಾಗೂ ನಾಲ್ಕು ಚಕ್ರದ ಕಾರು ಸೇರಿದಂತೆ ಇನ್ನಿತರ ವಾಹನಗಳಿಗೆ 500 ರೂ. ವಾರ್ಷಿಕ ತೆರಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ಮಹಾನಗರ ಪಾಲಿಕೆಯ ಅಧಿ ನಿಯಮದಡಿ ಮೂಲಸೌಕರ್ಯ ಉಪಕರವನ್ನು ವಿಧಿಸಲು ಅವಕಾಶವಿದ್ದು, ಈ ಹಿನ್ನಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳಿಂದ ತೆರಿಗೆ ವಸೂಲಿ ಮಾಡುವ ಮೂಲಕ ನಗರದ ರಸ್ತೆಗಳು ದುರಸ್ತಿ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನೀರಿನ ದರ ಹೆಚ್ಚಳ – ನೀರಿನ ದರವನ್ನು ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ. ಶೇ. 30ರಷ್ಟು ನೀರಿನ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಪಾಲಿಕೆಯು ತನ್ನ ಆದಾಯವನ್ನು ಹೆಚ್ಚಳ ಮಾಡಿಕೊಳ್ಳಲು ಕ್ರಮವಹಿಸಿದೆ. 2012ರಲ್ಲಿ ಗೃಹ ಬಳಕೆ ನೀರಿನ ಶುಲ್ಕದ ದರವನ್ನು ಪರಿಷ್ಕರಣೆ ಮಾಡಿದ್ದ ಪಾಲಿಕೆಯು 14 ವರ್ಷದ ಬಳಿಕ ನೀರಿನ ಶುಲ್ಕವನ್ನು ಪರಿಷ್ಕರಣೆ ಮಾಡಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನೀರಿನ ಶುಲ್ಕವನ್ನು ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. ಆದರೆ, ಗೃಹ ಬಳಕೆಯ ನೀರಿನ ಶುಲ್ಕವನ್ನು ಇದುವರೆಗೂ ಪರಿಷ್ಕರಣೆ ಮಾಡಿಲ್ಲ. ಈಗ ಅನಿವಾರ್ಯವಾಗಿ ನಿರ್ವಹಣೆ ದೃಷ್ಟಿಯಿಂದ ದರ ಏರಿಕೆ ಮಾಡಲಾಗುತ್ತಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ಸಮರ್ಥನೆ ಆಗಿದೆ. ಕನಿಷ್ಠ ದರದೊಂದಿಗೆ ನೀರಿನ ಪ್ರತಿ ಸ್ಲಾಬ್‌ನಲ್ಲಿಯೂ ಪರಿಷ್ಕರಣೆ ಮಾಡಲಾಗಿದ್ದು, ಗ್ರಾಹಕರು ಪ್ರತಿ ತಿಂಗಳು ಪಾವತಿಸುತ್ತಿದ್ದ ನೀರಿನ ಶುಲ್ಕದೊಂದಿಗೆ ಹೆಚ್ಚುವರಿಯಾಗಿ ಶೇ. 30ರಷ್ಟು ಪಾವತಿಸಬೇಕಾಗಿದೆ.
ಯುಜಿಡಿ ಶುಲ್ಕ ಹೆಚ್ಚಳ – ನೀರಿನ ಶುಲ್ಕದ ಒಟ್ಟು ಮೊತ್ತಕ್ಕೆ ಶೇ. 30ರಷ್ಟು ಇದ್ದ ಒಳಚರಂಡಿ ಶುಲ್ಕವನ್ನು ಶೇ. 40ಕ್ಕೆ ಹೆಚ್ಚಿಸಿ ಪರಿಷ್ಕರಣೆ ಮಾಡಲಾಗಿದೆ. ನೀರಿನ ಸಂಪರ್ಕ ಪಡೆಯದ ಗ್ರಾಹಕರಿಗೆ ಪ್ರತ್ಯೇಕವಾಗಿ ಒಳಚರಂಡಿ ಶುಲ್ಕವನ್ನು ವಿಧಿಸಲು ನಿರ್ಧರಿಸಲಾಗಿದೆ. ಪ್ರತಿ ಅಂತಸ್ತಿಗೂ ಪ್ರತ್ಯೇಕವಾಗಿ ಶುಲ್ಕ ವಿಧಿಸಲಾಗುತ್ತಿದೆ. ಒಳಚರಂಡಿ ಶುಲ್ಕ ಗೃಹಬಳಕೆಗೆ 100 ರೂ., ಗೃಹೇತರ ಬಳಕೆಗೆ 200 ರೂ., ವಾಣಿಜ್ಯ, ಕೈಗಾರಿಕೆಗೆ 300 ರೂ. ನಿಗದಿಪಡಿಸಲಾಗಿದೆ.
ಮೀಟರ್ ಅಳವಡಿಕೆ – ನೀರನ್ನು ಮಿತವಾಗಿ ಬಳಸಬೇಕು. ನೀರಿನ ಬಿಲ್ಲನ್ನು ನಿಗದಿತ ಅವಧಿ ಒಳಗೆ ಪಾವತಿಸಬೇಕು. ಮೀಟರ್ ದುರಸ್ತಿಯಲ್ಲಿರುವ ಅಥವಾ ಮೀಟರ್ ಇಲ್ಲದೆ ಇರುವ ಸಂಪರ್ಕಗಳು ತಕ್ಷಣವೇ ಇಲಾಖೆಯ ಗಮನಕ್ಕೆ ತಂದು ಸಧಿರಿಪಡಿಸಿಕೊಳ್ಳಬೇಕು ಅಥವಾ ಹೊಸ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉದ್ದಿಮೆ ತ್ಯಾಜ್ಯ ನಿರ್ವಹಣೆಗೂ ಶುಲ್ಕ – ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಾಣಿಜ್ಯ ಉದ್ದಿಮೆಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣಾ ಸೇವಾ ಶುಲ್ಕವನ್ನು ವಿಧಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ನಿಯಮ-2016ರನ್ವಯ ಪ್ರಾಥಮಿಕ ಹಂತದ ತ್ಯಾಜ್ಯ ಸಂಗ್ರಹಣೆ, ದ್ವಿತೀಯ ಹಂತದಲ್ಲಿ ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಣೆಗೆ ವಿವಿಧ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ.
ಇದಕ್ಕೆ ತಗಲುವ ಸೇವಾ ಶುಲ್ಕವನ್ನು ಪಾಲಿಕೆ ವ್ಯಾಪ್ತಿಯ ಗೃಹೋಪಯೋಗಿ ತ್ಯಾಜ್ಯ ಉತ್ಪಾದಕರಿಗೆ ಈಗಾಗಲೇ 2025-26ನೇ ಸಾಲಿನಲ್ಲಿ ಸಂಗ್ರಹಿಸಲು ಕ್ರಮ ವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ವಾಣಿಜ್ಯ ಕಟ್ಟಡಗಳ ತ್ಯಾಜ್ಯೋತ್ಪಾದಕರಿಂದ ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಬಹುದು ಹಾಗೂ ಪಾಲಿಕೆಗೆ ಆರ್ಥಿಕವಾಗಿ ಸಹಾಯಕವಾಗಲಿದೆ.
ನಗರಾಭಿವೃದ್ಧಿ ಇಲಾಖೆಯಿಂದ 2019ರ ಅಕ್ಟೋಬರ್ 9ರಂದು ಹೊರಡಿಸಲಾಗಿರುವ ಕರ್ನಾಟಕ ರಾಜ್ಯ ಪತ್ರದಲ್ಲಿ ಘನತ್ಯಾಜ್ಯ ನಿರ್ವಹಣಾ ಸೇವಾ ಶುಲ್ಕದ ಬಗ್ಗೆ ಉಲ್ಲೇಖಿಸಿರುವಂತೆ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಾಣಿಜ್ಯ ಉದ್ದಿಮೆಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣಾ ಸೇವಾ ಶುಲ್ಕವನ್ನು ವಿಧಿಸಲು ಮಾ.16ರಂದು ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2026-27ನೇ ಸಾಲಿನ ಆರ್ಥಿಕ ವರ್ಷದಿಂದ ಏ.1ರಿಂದ ಉದ್ದಿಮೆ ರಹದಾರಿ ಯೊಂದಿಗೆ ಘನತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹಿಸಲು ಕ್ರಮವಹಿಸಲಾಗಿದ್ದು, ಸಂಬಂಧಪಟ್ಟ ಮಾಹಿತಿಯನ್ನು ಪಾಲಿಕೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















