ಬಾಗಲಕೋಟೆ : ಬಿಜೆಪಿಗೆ ಸೋಲಿನ ಭಯ ಕಾಣಿಸಿದ್ದಕ್ಕೆ ಬಸನ ಗೌಡ ಯತ್ನಾಳ್ ಅವರನ್ನು ಪ್ರಚಾರಕ್ಕೆ ಕರೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಉಮೇಶ್ ಮೇಟಿ ಪರ ಪ್ರಚಾರ ನಡೆಸಲು ಸಿದ್ದರಾಮಯ್ಯ ಇಂದು ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಯಾವಾಗಲೋ ಹೀನಾಯ ಸ್ಥಿತಿಗೆ ತಲುಪಿದ್ದಕ್ಕೆ ಯತ್ನಾಳ್ ಅವರನ್ನು ಕರೆಸಿದ್ದಾರೆ ಎಂದರು.
ಇನ್ನು 15 ದಿನ ಅಥವಾ ಒಂದು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುವುದಿಲ್ಲ ಎಂಬ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ವಿ ಸೋಮಣ್ಣ ಅವರೇನು ನಮ್ಮ ಹೈಕಮಾಂಡಾ? ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ವಿ ಸೋಮಣ್ಣ ಕೆಲಸವಿಲ್ಲದ ಮಂತ್ರಿ ಎಂದು ತಿರುಗೇಟು ನೀಡಿದರು.
ಆಟೋ ಚಾಲಕರು ಮುನಿಯಪ್ಪ ಅವರ ಮನೆಗೆ ಘೇರಾವ್ ಹಾಕಿದ್ದಕ್ಕೆ ಕೇಂದ್ರ ಸರ್ಕಾರ ಎಲ್‌ಪಿಜಿ ನೀಡಬೇಕು. ಘೇರಾವ್ ಹಾಕುವ ಕೆಲಸ ಇದ್ದರೆ ನರೇಂಧ್ರ ಮೋದಿ ಅವರ ಮನೆ ಮುಂದೆ ಮುಂದೆ ಘೇರಾವ್ ಹಾಕಲಿ ಎಂದು ಸಿಟ್ಟು ಹೊರಹಾಕಿದರು.
ದಲಿತರಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮಾತ್ರ ಜಾಸ್ತಿ ಅನುದಾನ ನೀಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ಮುಸ್ಲಿಮರು ಈ ದೇಶದ ನಾಗರಿಕರಲ್ವಾ? ಅವರ ಜನಸಂಖ್ಯೆ ಎಷ್ಟಿದೆ ಗೊತ್ತಾ? 14% ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅವರಿದ್ದಾರೆ. ಎಲ್ಲರಿಗೂ ಹಣ ಇಟ್ಟಿದ್ದೇವೆ. ಹಾಗೆ ಅವರಿಗೂ ನೀಡಿದ್ದೇವೆ ಎಂದರು.














