ಮನೆ ರಾಜ್ಯ ಮೈಸೂರು ಹೊರ ವಲಯದಲ್ಲಿ ಹೊಸ ಬಡಾವಣೆ – ಅಭಿವೃದ್ಧಿ ಪ್ರಾಧಿಕಾರದಿಂದ ಡ್ರೋನ್‌ ಸಮೀಕ್ಷೆ ಆರಂಭ..!

ಮೈಸೂರು ಹೊರ ವಲಯದಲ್ಲಿ ಹೊಸ ಬಡಾವಣೆ – ಅಭಿವೃದ್ಧಿ ಪ್ರಾಧಿಕಾರದಿಂದ ಡ್ರೋನ್‌ ಸಮೀಕ್ಷೆ ಆರಂಭ..!

0

ಮೈಸೂರು : ಮೈಸೂರು ಹೊರ ವಲಯದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಡ್ರೋನ್ ಸಮೀಕ್ಷೆ ಆರಂಭ ಮಾಡಿದೆ. ದೊಡ್ಡ ಮಾರಗೌಡನಹಳ್ಳಿ, ನಾಗವಾಲ, ಕಮರವಳ್ಳಿ, ಬೊಮ್ಮೇನಹಳ್ಳಿ ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಇನ್ನು ಎಂಡಿಎ ಆಯುಕ್ತರು ರೈತ ಬಳಿ ಮಾತುಕತೆ ನಡೆಸುತ್ತಿದ್ದಾರೆ. 2 ಸಾವಿರ ಎಕರೆ ಜಾಗದಲ್ಲಿ 20 ಸಾವಿರ ಸೈಟ್‌ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಮೈಸೂರಿನ ನಿವೇಶನಾಕಾಂಕ್ಷಿಗಳಿಗೊಂದು ಸಿಹಿ ಸುದ್ದಿ. ಮೈಸೂರು ನಗರದ ಹೊರ ವಲಯದಲ್ಲಿ ಬೃಹತ್‌ ಬಡಾವಣೆ ನಿರ್ಮಿಸಲು ಮುಂದಾಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರವು, ಡ್ರೋನ್‌ ಸರ್ವೆ ಕಾರ್ಯ ಆರಂಭಿಸಿದೆ. ತಾಲೂಕಿನ ಇಲವಾಲ ಹೋಬಳಿಯ ದೊಡ್ಡ ಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ, ನಾಗವಾಲ ಗ್ರಾಮಗಳಲ್ಲಿ 50:50 ರ ಅನುಪಾತದಡಿ 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ಜಿ ಲಕ್ಷ್ಮೀ ಕಾಂತ ರೆಡ್ಡಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಕೆ ಅರ್‌ ರಕ್ಷಿತ್‌ ಡ್ರೋನ್‌ ಸರ್ವೇಗೆ ಚಾಲನೆ ನೀಡಿದರು. ಡ್ರೋನ್‌ ಸರ್ವೇ ಕಾರ್ಯದ ಉಸ್ತುವಾರಿಯೊಂದಿಗೆ ಎಂಡಿಎ ಅಧಿಕಾರಿಗಳು, ಭೂ ಮಾಲೀಕರು ಇದ್ದರು. ಈ ಯೋಜನೆಯಡಿ ರೈತರಿಗೆ ಯಾವುದೇ ಖರ್ಚು ಇಲ್ಲದೆ ಬಡಾವಣೆ ರಚಿಸಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಬಿಟ್ಟು ಕೊಡಲು ಎಂಡಿಎ ನಿರ್ಧರಿಸಿದೆ. ರೈತರಿಂದಲೂ ಇದಕ್ಕೆ ಪೂರಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಡ್ರೋನ್‌ ಸರ್ವೇ ಪ್ರಾರಂಭಗೊಂಡಿದೆ.

ಜಮೀನು ಒಪ್ಪಂದಕ್ಕೆ ಮನವೊಲಿಕೆ – 2 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ನಿವೇಶನಗಳನ್ನು ಒಳಗೊಂಡ ಬೃಹತ್‌ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 50:50 ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಿದ ನಂತರ ಎಂ ಡಿ ಎ ಆಯುಕ್ತ ಕೆ ಆರ್‌ ರಕ್ಷಿತ್‌ ಸ್ವತಃ ರೈತರೊಂದಿಗೆ ನೇರ ಮಾತುಕತೆ ನಡೆಸಿ ಜಮೀನು ಒಪ್ಪಂದಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾದರು.

ರೈತರಿಗೆ ಮನವರಿಕೆ ಮಾಡಿಕೊಟ್ಟ ಆಯುಕ್ತರು – ಹೊಸ ಬಡಾವಣೆ ನಿರ್ಮಾಣ ಸಂಬಂಧ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ನಾಗವಾಲ, ಬೊಮ್ಮೇನಹಳ್ಳಿ, ಕಮರಹಳ್ಳಿ, ದೊಡ್ಡ ಮಾರಗೌಡನಹಳ್ಳಿ ಗ್ರಾಮಗಳ ಜಮೀನುಗಳ ಭೂ ಮಾಲೀಕರನ್ನು ನೇರವಾಗಿ ಭೇಟಿ ಮಾಡಿ ಬಡಾವಣೆ ರಚನೆಗೆ ಭೂಮಿ ಕೊಟ್ಟರೆ ಆಗುವ ಪ್ರಯೋಜನ, ಯಾವುದೇ ಹಣ ಹೂಡಿಕೆ ಇಲ್ಲದೇ ಶೇ 50 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಬಯಸಿರುವ ವಿಚಾರವನ್ನು ಮನವರಿಕೆ ಮಾಡಿಕೊಟ್ಟರು.

20 ಸಾವಿರ ನಿವೇಶನಗಳ ರಚನೆ – ಮೈಸೂರು ತಾಲೂಕಿನ ಇಲವಾಲ ಹೋಬಳಿ ಬೊಮ್ಮೇನಹಳ್ಳಿ, ನಾಗವಾಲ, ಕಮ್ಮರಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿವಿವಿಧ ಸರ್ವೇ ನಂಬರ್‌ಗಳನ್ನು ಗುರುತಿಸಿದ್ದು, ನಾಗವಾಲ 429.13, ಬೊಮ್ಮೇನಹಳ್ಳಿ- 766.33, ದೊಡ್ಡಮಾರಗೌಡನಹಳ್ಳಿ – 326.38, ಕಮ್ಮರಹಳ್ಳಿ – 336.20 ಎಕರೆ ಸೇರಿದಂತೆ 2113.24 ಎಕರೆಯನ್ನು ಗುರುತಿಸಲಾಗಿದೆ. ಈ ಗ್ರಾಮಗಳ ಒಟ್ಟು ಜಮೀನನ್ನು ಒಟ್ಟುಗೂಡಿಸಿ 20 ಸಾವಿರ ನಿವೇಶನ ರಚನೆಯಾಗಲಿದೆ.