ಜೈಪುರ : ಆರ್‌ಸಿಬಿ ತಂಡದಿಂದ ಹೊರಬಂದಿದ್ದು ನನ್ನ ವೈಯಕ್ತಿಕ ನಿರ್ಧಾರವಲ್ಲ, ನನ್ನನ್ನ ಕೈಬಿಟ್ಟಿದ್ದಕ್ಕೆ ಕಾರಣ ಕೂಡ ತಿಳಿಸಿಲ್ಲ ಎಂದು ರೇಪ್ ಆರೋಪಿಯೂ ಆಗಿರುವ ಆರ್‌ಸಿಬಿ ಸ್ಟಾರ್ ವೇಗಿ ಯಶ್ ದಯಾಳ್ ಹೇಳಿದ್ದಾರೆ. 2025ರ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಟ್ರೋಫಿ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದ ವೇಗಿ ಯಶ್ ದಯಾಳ್ ತಮ್ಮನ್ನ ತಂಡದಿಂದ ಬಿಟ್ಟಿದ್ದರ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ವೈಯಕ್ತಿಕ ಕಾರಣಗಳಿಂದಾಗಿ ದಯಾಳ್ ಈ ವರ್ಷ ಬೆಂಗಳೂರು ತಂಡಕ್ಕೆ ಆಡುವುದಿಲ್ಲ ಎಂದು ಬಹಿರಂಗಪಡಿಸಿದರು. ದಯಾಳ್ ನೀಡಿದ ಹೇಳಿಕೆ ಬೊಬಾಟ್ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ. ಪಾಡ್ ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ದಯಾಳ್ ತಂಡದಿಂದ ತಮನ್ನ ಕೈಬಿಟ್ಟಿದ್ದರ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.
ಆರ್‌ಸಿಬಿ ಅದು ನನ್ನ ತಂಡ, ಅವರು ನನ್ನನ್ನ ತೆಗದುಹಾಕಲ್ಲ. ಈ ಆವೃತ್ತಿಯಲ್ಲೂ ನನ್ನನ್ನ ರಿಟೇನ್ ಪಟ್ಟಿಯಲ್ಲೇ ಉಳಿಸಿಕೊಂಡರು. ನನ್ನ ಬದಲಿಗೆ ಬೇರೆ ಆಟಗಾರನನ್ನೂ ತೆಗೆದುಕೊಂಡಿಲ್ಲ. ಬಹುಶಃ ನಾನು ಅರ್‌ಸಿಬಿ ತಂಡದ ಪ್ರಮುಖ ಭಾಗ ಎಂದು ಭಾವಿಸಿರಬಹುದು. ಅಲ್ಲದೇ ಈ ಋತುವಿನಿಂದ ಹೊರಗುಳಿಯುವುದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಈ ಹೇಳಿಕೆ ವಿವಾದಾತ್ಮಕವಾಗಿರಬಹುದು.
ಆದರೆ, ನಿರ್ಧಾರ ಯಾವಾಗಲೂ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಆರ್‌ಸಿಬಿ ನಿರ್ಧಾರದ ಹಿಂದಿನ ಕಾರಣವೇನೆಂದು ನನಗೆ ತಿಳಿದಿಲ್ಲ. ಅವರು ನನ್ನನ್ನ ಮಿಸ್ ಮಾಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ನಾನಂತೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಈ ಋತುವಿನಲ್ಲಿ ಮೈದಾನಕ್ಕೆ ಹಾಜರಾಗದಿರಬಹುದು ಆದ್ರೆ ಆರ್‌ಸಿಬಿ ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ನಿರ್ದೇಶಕರು, ತರಬೇತುದಾರರು ಹಾಗೂ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಸಂಪರ್ಕ ಮುರಿದುಹೋಗಿಲ್ಲ ಎಂದು ದಯಾಳ್ ಹೇಳಿಕೊಂಡಿದ್ದಾರೆ. ಯಶ್ ದಯಾಳ್ ಅವರ ಅನುಪಸ್ಥಿತಿಗೆ ಕಾನೂನು ಪ್ರಕ್ರಿಯೆ ಕೂಡ ಕಾರಣವಾಗಿದೆ.
ಬಾಲಕಿಯೊಬ್ಬಳ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 2025 ರ ಜುಲೈನಲ್ಲಿ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಭಾವನಾತ್ಮಕವಾಗಿ ನನ್ನನ್ನ ಕಟ್ಟಿಹಾಕಿ, ಕ್ರಿಕೆಟ್ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. 2 ವರ್ಷಗಳ ಕಾಲ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು. ಇದಕ್ಕೂ ಮುನ್ನ ಗಾಜಿಯಾಬಾದ್‌ನ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಎಫ್‌ಐಆರ್ ಕೂಡ ದಾಖಲಾಗಿತ್ತು. ಆದ್ರೆ ಆ ಪ್ರಕರಣದಲ್ಲಿ ದಯಾಳ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು. ಇದಾದ ಕೆಲ ದಿನಗಳಲ್ಲೇ ಪೋಕ್ಸೋ ಕೇಸ್ ದಾಖಲಾಗಿದೆ.


















