ಮನೆ ರಾಜ್ಯ ಕೊಲೆ ಶಂಕೆ – ನಾಪತ್ತೆಯಾಗಿದ್ದ, ಪ್ರಥಮ ದರ್ಜೆ ಕಂಟ್ರಾಕ್ಟರ್ ಶವವಾಗಿ ಪತ್ತೆ..!

ಕೊಲೆ ಶಂಕೆ – ನಾಪತ್ತೆಯಾಗಿದ್ದ, ಪ್ರಥಮ ದರ್ಜೆ ಕಂಟ್ರಾಕ್ಟರ್ ಶವವಾಗಿ ಪತ್ತೆ..!

0

ಮಂಡ್ಯ : ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ, ಪ್ರಥಮ ದರ್ಜೆ ಗುತ್ತಿಗೆದಾರ ಅನುಮಾನಾಸ್ಪದ ರೀತಿಯಲ್ಲಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ಪವನ್ (27) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಪ್ರಥಮ ದರ್ಜೆ ಗುತ್ತಿಗೆದಾರ. ಪವನ್ ಕೋಟ್ಯಂತರ ರೂ. ಮೌಲ್ಯದ ಎಲೆಕ್ಟ್ರಿಕ್ ಕಾಮಗಾರಿಯನ್ನು ನಡೆಸುತ್ತಿದ್ದ. ಏ.2ರಂದು ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗುತ್ತೇನೆ ಎಂದು ತೆರಳಿದ್ದ ಪವನ್ ಮನೆಗೆ ವಾಪಸ್ ಬಂದಿರಲಿಲ್ಲ.

ನಾಪತ್ತೆ ಬಳಿಕ ಪವನ್ ಫೋನ್ ಸ್ಪೀಚ್ ಆಫ್ ಆಗಿದ್ದು, ಸಾಮಾಜಿಕ ಜಾಲತಾಣದ ಖಾತೆಗಳು ಡಿ ಆಕ್ಟೀವ್ ಆಗಿದ್ದವು. ಬಳಿಕ ಮನೆಯವರು ಹಾಗೂ ಸ್ನೇಹಿತರು ಪವನ್‌ಗಾಗಿ ಹುಡುಕಾಟ ನಡೆಸಿದ್ದರು. ನಂತರ ಈ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಸೋಮವಾರ ಪವನ್ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

ಈತನ ಸಾವಿನ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದು, ಪವನ್‌ನನ್ನು ಕೊಲೆ ಮಾಡಿ ಬಳಿಕ ನದಿಗೆ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.