ನವದೆಹಲಿ : ಅಮೆರಿಕ-ಇರಾನ್ ನಡುವೆ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ. ಮೋದಿ ಸರ್ಕಾರದ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, 2008ರ ಮುಂಬೈ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಸರ್ಕಾರವು ಪಾಕಿಸ್ತಾನದ ದುಷ್ಕೃತ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಮೂಲಕ ಆ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿಸುವಲ್ಲಿ ಯಶಸ್ವಿಯಾಗಿತ್ತು.
ಆದರೆ ಮೋದಿ ಸರ್ಕಾರವು ಪಾಕಿಸ್ತಾನವನ್ನು ಒಂಟಿಯಾಗಿಸುವ ಬದಲು, ಆ ದೇಶವು ಈಗ ಅಮೆರಿಕ-ಇರಾನ್ ನಡುವೆ ಸಂಧಾನಕಾರನಾಗಿ ಹೊರಹೊಮ್ಮುವಂತೆ ಮಾಡಿದೆ ಎಂದು ದೂರಿದ್ದಾರೆ. ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ಪಾಕಿಸ್ತಾನವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವುದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ. ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯಾಗಿಸುವ ಭಾರತದ ಪ್ರಯತ್ನ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ‘ವಿಶ್ವಗುರು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ತಾನದಂತಹ ದೇಶವು ಜಾಗತಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಮೋದಿ ಅವರ “ವ್ಯಕ್ತಿತ್ವ ಆಧಾರಿತ ವಿದೇಶಾಂಗ ನೀತಿ”ಯ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಆಪರೇಷನ್ ಸಿಂಧೂರವನ್ನು ಮೇ 10, 2025 ರಂದು ಇದ್ದಕ್ಕಿದ್ದಂತೆ ಯಾಕೆ ನಿಲ್ಲಿಸಲಾಯಿತು ಎಂಬುದಕ್ಕೆ ಪ್ರಧಾನಿ ಮೋದಿ ಇನ್ನೂ ಉತ್ತರ ನೀಡಿಲ್ಲ. ಇದರ ಮೊದಲ ಘೋಷಣೆಯನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಿಂದ ಬಂದಿತ್ತು ಮತ್ತು ಅಂದಿನಿಂದ ಅಮೆರಿಕದ ಅಧ್ಯಕ್ಷರು ಸುಮಾರು ನೂರು ಬಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು ದಲಾಲ್ (ದಲ್ಲಾಳಿ) ಎಂದು ಕರೆದಿದ್ದರು. ಆದರೆ ಈಗ ಅದೇ ದೇಶವು ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕೇಂದ್ರ ಸರ್ಕಾರದ ಗೊಂದಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಸ್ವಯಂ ಘೋಷಿತ ವಿಶ್ವಗುರುವಿನ 56 ಇಂಚಿನ ಎದೆ ಕುಗ್ಗಿದೆ. ಇಸ್ರೇಲ್ನ ಯುದ್ಧೋನ್ಮಾದದ ಬಗ್ಗೆ ಮಾತ್ರವಲ್ಲದೆ, ಶ್ವೇತಭವನದಲ್ಲಿ ಅವರ ಉತ್ತಮ ಸ್ನೇಹಿತ ಬಳಸುತ್ತಿರುವ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಅವಮಾನಕರ ಭಾಷೆಯ ಬಗ್ಗೆ ಮೋದಿಯ ಮೌನ ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದ್ದಾರೆ.















