ಮನೆ ರಾಜ್ಯ ಪೊನ್ನಂಪೇಟೆಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ..!

ಪೊನ್ನಂಪೇಟೆಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ..!

0

ಮಡಿಕೇರಿ : ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾದ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ನಡೆದಿದೆ. ಆನೆ ದಾಳಿಯಲ್ಲಿ ಸಾವನ್ನಪ್ಪಿದವರನ್ನು ಕಾಯಿಮಾನಿ ನಿವಾಸಿ ರತ್ತು ಎಂದು ಗುರುತಿಸಲಾಗಿದೆ.

ಇಂದು (ಏ.8) ಬೆಳ್ಳಂಬೆಳಗ್ಗೆ ರತ್ತು ಅವರು ಕುರ್ಚಿ-ಕಾಯಿಮಾನಿ ನಡುವೆ ಇರುವ ತಮ್ಮ ಕಾಫಿ ತೋಟಕ್ಕೆ ಎಂದಿನಂತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ಭಾಗದಲ್ಲಿ ಸುಮಾರು 8 ರಿಂದ 10 ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಹಗಲು ಹೊತ್ತಿನಲ್ಲೇ ಆನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಆನೆಗಳ ಹಿಂಡನ್ನು ಕಾಡಿಗಟ್ಟಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.