ಮನೆ ರಾಜ್ಯ ಸಿಎಂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಕುಂಟೆತ್ತುಗಳು, ಈಗಲೇ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕು – ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಿಎಂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಕುಂಟೆತ್ತುಗಳು, ಈಗಲೇ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಬೇಕು – ಪ್ರತಿಪಕ್ಷ ನಾಯಕ ಆರ್‌.ಅಶೋಕ

0

ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಕುಂಟೆತ್ತುಗಳಂತಾಗಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯಲು ಈ ಉಪ ಚುನಾವಣೆಯಲ್ಲೇ ಜನರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ದಾವಣೆಗೆರೆ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028 ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಆಗ ಖಂಡಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಜನರು ಈ ಸರ್ಕಾರವನ್ನು ಕಿತ್ತೊಗೆಯಲು ಈ ಉಪ ಚುನಾವಣೆಯಲ್ಲೇ ಸಹಕರಿಸಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಂದಾಗಿ ಕೈ ಹಿಡಿದು ಎತ್ತಿ ಜೋಡೆತ್ತುಗಳು ಎಂದು ಹೇಳಿದ್ದರು. ಈಗ ಇವರಿಬ್ಬರೂ ಕುಂಟೆತ್ತುಗಳಾಗಿದ್ದಾರೆ. ಇಬ್ಬರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಇಂತಹ ಕುಂಟೆತ್ತುಗಳು ರಾಜ್ಯಕ್ಕೆ ಬೇಕಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ದುರಾಡಳಿತ ಹಾಗೂ 60 ಪರ್ಸೆಂಟ್‌ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕಾರ್ಯ ಎಲ್ಲೂ ನಡೆಯುತ್ತಿಲ್ಲ. ಈ ಬಾರಿ 1.32 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಸಿದ್ದರಾಮಯ್ಯ ಅವರೊಬ್ಬರೇ 4 ಲಕ್ಷ ಕೋಟಿ ರೂ. ಗೂ ಅಧಿಕ ಸಾಲ ಮಾಡಿದ್ದಾರೆ.

ಒಬ್ಬ ಕನ್ನಡಿಗನ ತಲೆಯ ಮೇಲೆ 80 ಲಕ್ಷ ರೂ. ಸಾಲದ ಹೊರೆ ಇದೆ. ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿ ಅದನ್ನೂ ಸರಿಯಾಗಿ ಮಾಡಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ 5,000 ಕೋಟಿ ರೂ. ನೀಡಿಲ್ಲ. ಅನ್ನಭಾಗ್ಯದಡಿ 750 ಕೋಟಿ ರೂ. ಬಾಕಿ ಉಳಿದಿದೆ. ಗುತ್ತಿಗೆದಾರರಿಗೆ ಬಾಕಿ ಹಣ ನೀಡಿಲ್ಲ. ಈ ಎಲ್ಲ ಸಮಸ್ಯೆಗಳು ಉಪ ಚುನಾವಣೆಯಲ್ಲಿ ಬಿಂಬಿತವಾಗಲಿದೆ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿತ್ತು. ಬಿಜೆಪಿ ರೂಪಿಸಿದ ಕಾರ್ಯಕ್ರಮಗಳನ್ನು ಈಗ ಕಾಂಗ್ರೆಸ್‌ ಉದ್ಘಾಟನೆ ಮಾಡುತ್ತಿದೆಯೇ ಹೊರತು ಹೊಸ ಕಾರ್ಯಕ್ರಮಗಳನ್ನು ನೀಡುತ್ತಿಲ್ಲ. ಕೇಂದ್ರ ಸರ್ಕಾರ ಈ ಹಿಂದೆ ತುಪ್ಪದ ಮೇಲಿನ ಜಿಎಸ್‌ಟಿ ಇಳಿಸಿದಾಗ ರಾಜ್ಯ ಸರ್ಕಾರ ಮರಳಿ ತೆರಿಗೆ ಹೇರಿತ್ತು. ಈಗ ಪೆಟ್ರೋಲ್‌-ಡೀಸೆಲ್‌ ದರವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಉಪಚುನಾವಣೆ ಬಳಿಕ ರಾಜ್ಯ ಸರ್ಕಾರ ಬೇರೆ ಬೇರೆ ತೆರಿಗೆಗಳನ್ನು ಹೇರಲಿದೆ. ಜನರು ಈಗಲೇ ಬುದ್ಧಿ ಕಲಿಸಿದರೆ ತೆರಿಗೆ ಹೇರುವುದಿಲ್ಲ ಎಂದರು.

ಐಪಿಎಲ್‌ ಪಂದ್ಯದ ಟಿಕೆಟ್‌ಗಳನ್ನು ಶಾಸಕರಿಂದ ಹಣ ಪಡೆದೇ ನೀಡಿ ಎಂದು ನಾನು ಸಲಹೆ ನೀಡಿದ್ದೇನೆ. ಉಚಿತವಾಗಿ ನೀಡುವುದು ಬೇಕಿಲ್ಲ. ಕ್ರಿಕೆಟ್‌ ಪಂದ್ಯ ನೋಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ತಂಡದ ಸಮೇತ ಹೋಗುತ್ತಾರೆ. ಇದರ ಬದಲು ಕ್ಷೇತ್ರದಲ್ಲಿನ ಕ್ರಿಕೆಟ್‌ ಆಸಕ್ತರಿಗೆ, ಕ್ರೀಡಾಪಟುಗಳಿಗೆ ಟಿಕೆಟ್‌ ನೀಡಬಹುದು. ಈ ಮೂಲಕ ಶಾಸಕರು ತಮ್ಮ ಕ್ಷೇತ್ರದಲ್ಲಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬಹುದು.

ನಾನು ಉಚಿತ ಟಿಕೆಟ್‌ ಕೇಳುವುದೂ ಇಲ್ಲ, ನೋಡಲು ಹೋಗುವುದೂ ಇಲ್ಲ. ನಾನು ಕಬಡ್ಡಿ ಆಟಗಾರನೇ ಹೊರತು ಕ್ರಿಕೆಟ್‌ನಲ್ಲಿ ಆಸಕ್ತಿ ಇಲ್ಲ. ಶಾಸಕರು ಹಣ ಕೊಟ್ಟು ಟಿಕೆಟ್‌ ಖರೀದಿ ಮಾಡುವುದು ಉತ್ತಮ ಎಂದರು. ದಾವಣಗೆರೆಯಲ್ಲಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರೊಂದಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಅವರು ಚುನಾವಣಾ ಘೋಷಣಾಪತ್ರ ಬಿಡುಗಡೆ ಮಾಡಿದರು.