ಮನೆ ರಾಷ್ಟ್ರೀಯ ಅಸ್ಸಾಂನಲ್ಲಿ ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ – ಪ್ರಧಾನಿ ಮೋದಿ

ಅಸ್ಸಾಂನಲ್ಲಿ ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ – ಪ್ರಧಾನಿ ಮೋದಿ

0

ಅಸ್ಸಾಂನ ಚಹಾ ತೋಟದಲ್ಲಿ ಕಳೆದ ಕ್ಷಣವನ್ನು ನರೇಂದ್ರ ಮೋದಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼʼಇವತ್ತು ಬೆಳಗ್ಗೆ ದಿಬ್ರುಗಢದ ಚಹಾ ತೋಟಕ್ಕೆ ತೆರಳಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದೆ. ಇದೊಂದು ಅವಿಸ್ಮರಣೀಯ ಅನುಭವʼʼ ಎಂದು ಅವರು ಬರೆದುಕೊಂಡಿದ್ದಾರೆ.

ದಿಬ್ರುಗಢ ಟೀ ಎಸ್ಟೇಟ್‌ಗೆ ಆಗಮಿಸಿದ ಪ್ರಧಾನಿಯನ್ನು ಕಂಡು ಕಾರ್ಮಿಕರು ಒಂದು ಕ್ಷಣ ಬೆರಗಾದರು. ಅವರೊಂದಿಗೆ ಬೆರೆತ ಮೋದಿ ತಾವು ಚಹಾ ಎಲೆಗಳನ್ನು ಕಿತ್ತು ಅವರಿಗೆ ನೆರವಾದರು. ಬಳಿಕ ಮೋದಿಯೊಂದಿಗ ಕಾರ್ಮಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ಅಸ್ಸಾಂನ ಸಾಂಪ್ರದಾಯುಕ ಹಾಡು, ಕುಣಿತಗಳ ಪ್ರದರ್ಶನವೂ ನಡೆಯಿತು.

ಪ್ರಧಾನಿ ಮೋದಿ ಚಾಯ್‌ವಾಲಾ ಎಂದೇ ಪ್ರಸಿದ್ಧ. ಅವರು ಇದನ್ನೇ ಕಾರ್ಮಿಕರ ಜತೆ ಹಂಚಿಕೊಂಡರು. ʼʼನಾನೂ ಚಾಯ್‌ ವಾಲಾ. ನಿಮಗೆ ಗೊತ್ತಲ್ಲ? ನಾನು ಚಿಕ್ಕಂದಿನಲ್ಲಿ ಚಹಾ ಮಾರಾಟ ಮಾಡಿದ್ದೇನೆʼʼ ಎಂದು ಹೇಳಿದರು. ಸೆಲ್ಫಿ ತೆಗೆದ ಮಹಿಳೆ ಜತೆ, ʼʼಫೋಟೊ ಕ್ಲಿಕ್ಕಿಸುವುದರಲ್ಲಿ ನೀವು ಪರಿಣಿತರಾಗಿದ್ದೀರಿʼʼ ಎಂದು ಹೇಳಿ ಕಾಲೆಳೆದರು.

ಚಹಾ ತೋಟದ ಕಾರ್ಮಿಕರ ಯೋಗ-ಕ್ಷೇಮ ವಿಚಾರಿಸಿದ ಮೋದಿ ಅವರ ಮಕ್ಕಳ ಬಗ್ಗೆಯೂ ಕೇಳಿ ತಿಳಿದುಕೊಂಡರು. ಅವರು ಉನ್ನತ ಹುದ್ದೆ ಅಲಂಕರಿಸುವಂತಾಗಲಿ ಎಂದು ಹಾರೈಸಿದರು. ಇದೇ ವೇಳೆ ಚಹಾ ಎಲೆ ಕೀಳಲು ಹೇಳಿಕೊಟ್ಟ ಮಹಿಳೆಯನ್ನು ಮೋದಿ ಹೊಗಳಿದರು. ʼʼನೀವು ನನಗೆ ಗುರುಗಳಿದ್ದಂತೆʼʼ ಎಂದರು.

ಅಸ್ಸಾಂನಲ್ಲಿ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಬಿರುಸಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಬಿಜೆಪಿ ಪರ ಪ್ರಚಾರ ನಡೆಸಲು ಅಸ್ಸಾಂಗೆ ಅಗಮಿಸಿದ್ದರು. 126 ಕ್ಷೇತ್ರಗಳ ಅಸ್ಸಾಂ ವಿಧಾನಸಭೆಗೆ ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರ ಬೀಳಲಿದೆ.