ಪ್ಲೇಟ್ಲೆಟ್ಗಳು ನಮ್ಮ ದೇಹದ ರಕ್ತದಲ್ಲಿ ಇರುವ ಸಣ್ಣ ಕೋಶಗಳಾಗಿದ್ದು, ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಹದಲ್ಲಿ ಗಾಯವಾದಾಗ, ಈ ಪ್ಲೇಟ್ಲೆಟ್ಗಳು ಆ ಸ್ಥಳದಲ್ಲಿ ಸೇರಿ ರಕ್ತದ ಗಡ್ಡೆ ರೂಪಿಸಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಇರುತ್ತದೆ.
ಇದು 1.5 ಲಕ್ಷಕ್ಕಿಂತ ಕಡಿಮೆಯಾದರೆ ಅದು ಅಪಾಯದ ಸೂಚನೆ. 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು. ದೀರ್ಘಕಾಲ ಪ್ಲೇಟ್ಲೆಟ್ಗಳ ಕೊರತೆ ಇದ್ದರೆ ಸಣ್ಣ ಗಾಯವೂ ದೊಡ್ಡ ಸಮಸ್ಯೆಯಾಗಬಹುದು. ಆದರೆ ನಿಮಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಪ್ಲೇಟ್ಲೆಟ್ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ ಎಂಬುದು ತಿಳಿದಿದೆಯೇ, ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಪ್ಲೇಟ್ಲೆಟ್ ಕಡಿಮೆಯಾಗಲು ಕಾರಣವಾಗುವ ರೋಗಗಳು : ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್ಗುನ್ಯಾ ಮತ್ತು ಮಲೇರಿಯಾ, ಟೈಫಾಯ್ಡ್ ಮತ್ತು ವೈರಲ್ ಜ್ವರ, ಲೀವರ್ ಸಮಸ್ಯೆಗಳು ಅದರಲ್ಲಿಯೂ ಸಿರೋಸಿಸ್ ಸಮಸ್ಯೆ, ಬೋನ್ ಮ್ಯಾರೋ ಸಮಸ್ಯೆಗಳು, ಕ್ಯಾನ್ಸರ್ ಮತ್ತು ಕೀಮೋಥೆರಪಿ, ಆಟೋಇಮ್ಯೂನ್ ರೋಗಗಳು ಈ ರೋಗಗಳಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.
ಪ್ಲೇಟ್ಲೆಟ್ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು : ಬೇಗ ಗಾಯವಾಗುವುದು, ರಕ್ತಸ್ರಾವ ಬೇಗ ನಿಲ್ಲದಿರುವುದು, ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಂಡುಬರುವುದು, ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವ, ಮಹಿಳೆಯರಲ್ಲಿ ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ರಕ್ತಸ್ರಾವ ದಣಿವು, ದುರ್ಬಲತೆ ಮತ್ತು ತಲೆಸುತ್ತು ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.
ಪ್ಲೇಟ್ಲೆಟ್ಗಳ ಕೊರತೆಯಿಂದ ಹೇಗೆ ರಕ್ಷಿಸಿಕೊಳ್ಳುವುದು? – ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಸೊಳ್ಳೆಗಳಿಂದ ದೂರವಿರಿ, ಪೌಷ್ಟಿಕ ಆಹಾರ ಸೇವಿಸಿ (ಹಸಿರು ತರಕಾರಿಗಳು, ಹಣ್ಣುಗಳು, ಪ್ರೋಟೀನ್), ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.., ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸಬೇಡಿ, ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ, ಪ್ಲೇಟ್ಲೆಟ್ಗಳ ಪ್ರಮಾಣ ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಆಗಿದೆ.














