ಮನೆ ರಾಷ್ಟ್ರೀಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ; ಉಜ್ಜಯಿನಿ ಮಹಾಕಾಳೇಶ್ವರನ ಮೊರೆಹೋದ ನಿತೀಶ್ ರಾಣಾ

ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ; ಉಜ್ಜಯಿನಿ ಮಹಾಕಾಳೇಶ್ವರನ ಮೊರೆಹೋದ ನಿತೀಶ್ ರಾಣಾ

0

ಭೋಪಾಲ್ : 2026ರ ಐಪಿಎಲ್‌ನ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ನಿತೀಶ್ ರಾಣಾ, ಇಂದು (ಏ.14) ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ.

ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಪಿಎಲ್ 2026ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದು, ಈ ಪೈಕಿ ನಿತೀಶ್ ರಾಣಾ 3 ಪಂದ್ಯಗಳನ್ನಾಡಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಮೊದಲ ಪಂದ್ಯದಲ್ಲಿ 17 ಎಸೆತಗಳಲ್ಲಿ 15 ರನ್, ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 3 ಎಸೆತಗಳಲ್ಲಿ 0 ಹಾಗೂ ಗುಜರಾತ್ ವಿರುದ್ಧ 6 ಎಸೆತಗಳಲ್ಲಿ 5 ರನ್ ಹೊಡೆದಿದ್ದಾರೆ.

ಚೆನ್ನೈ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ನಿತೀಶ್ ಹೊರಗುಳಿದಿದ್ದರು. ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆ ಸದ್ಯ ಉಜ್ಜಯಿನಿ ಮಹಾಕಾಳೇಶ್ವರನ ಮೊರೆ ಹೋಗಿದ್ದಾರೆ.

ಈವರೆಗೆ, ಡಿಸಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಗೆಲುವು ಮತ್ತು ಎರಡು ಸೋಲು ಕಂಡಿದೆ. ಅಂಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಏ.18ರಂದು ಡೆಲ್ಲಿ ತಂಡ ಆರ್‌ಸಿಬಿಯನ್ನು ಎದುರಿಸಲಿದೆ.