ಮುಂಬೈ : ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕರು ಕಡ್ಡಾಯವಾಗಿ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು, ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ನಿಯಮವನ್ನು ಮಹಾರಾಷ್ಟ್ರ ದಿನವಾದ ಮೇ 1 ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ. ಪ್ರತಾಪ್ ಸರ್ನಾಯಕ್ ಅವರು ಮಾತನಾಡಿ, ಮಹಾರಾಷ್ಟ್ರ ದಿನಾಚರಣೆಯ ಜೊತೆಜೊತೆಗೆ ಮೇ 1 ರಿಂದ ಪರವಾನಗಿ ಪಡೆದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಲಿದೆ.
ಚಾಲಕರು ಭಾಷೆಯನ್ನು ಓದಲು ಮತ್ತು ಬರೆಯಲು ಸಾಧ್ಯವೇ ಎಂದು ಪರಿಶೀಲಿಸಲು ಮೋಟಾರ್ ಸಾರಿಗೆ ಇಲಾಖೆಯ 59 ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಕಚೇರಿಗಳ ಮೂಲಕ ರಾಜ್ಯಾದ್ಯಂತ ತಪಾಸಣಾ ಅಭಿಯಾನವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪರವಾನಗಿ ನೀಡಲು ಸ್ಥಳೀಯ ಭಾಷೆಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಯಮವು ಈಗಾಗಲೇ ಜಾರಿಯಲ್ಲಿದ್ದರೂ ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಈ ಕಠಿಣ ಕ್ರಮವು ಚಾಲಕರಿಗೆ ಮಾತ್ರ ಸೀಮಿತವಾಗಿಲ್ಲ. ಈ ನಿಯಮಗಳನ್ನು ನಿರ್ಲಕ್ಷಿಸಿ ತಪ್ಪಾಗಿ ಪರವಾನಗಿಗಳನ್ನು ನೀಡಿದ ಸಾರಿಗೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.
ತಾವು ವ್ಯವಹಾರ ನಡೆಸುವ ಪ್ರದೇಶದ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬರ ಕರ್ತವ್ಯ. ಒಬ್ಬರ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವುದು ಮುಖ್ಯವಾದರೂ, ಅಲ್ಲಿ ಕೆಲಸ ಮಾಡುವಾಗ ರಾಜ್ಯದ ಭಾಷೆಯನ್ನು ಗೌರವಿಸುವುದು ಅಷ್ಟೇ ಮುಖ್ಯ ಎಂದರು.
ಈಗಾಗಲೇ ಮೀರಾ-ಭಯಂದರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ಪರಿಶೀಲನೆ ಆರಂಭವಾಗಿದೆ. ಹೊಸದಾಗಿ ಆಟೋ ಅಥವಾ ಟ್ಯಾಕ್ಸಿ ಪರ್ಮಿಟ್ ಪಡೆಯಲು ಬಯಸುವವರು ಅಥವಾ ಹಳೆಯ ಪರ್ಮಿಟ್ ನವೀಕರಿಸುವವರು ಮರಾಠಿ ಭಾಷೆಯ ಜ್ಞಾನವನ್ನು ಹೊಂದಿರಲೇಬೇಕು. ಇದು ಕೇವಲ ಮಾತನಾಡುವುದಕ್ಕೆ ಸೀಮಿತವಾಗಿರದೆ, ಪ್ರಾಥಮಿಕ ಹಂತದ ಓದು ಮತ್ತು ಬರಹವನ್ನೂ ಒಳಗೊಂಡಿರುತ್ತದೆ
ವಿವಿಧ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರವು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಹಿಂದೆ 2016ರಲ್ಲಿ ಇಂತಹದ್ದೇ ನಿಯಮವನ್ನು ಮುಂಬೈ ಹೈಕೋರ್ಟ್ ರದ್ದುಗೊಳಿಸಿತ್ತು. ಭಾಷೆಯ ಆಧಾರದ ಮೇಲೆ ಉದ್ಯೋಗ ನಿರಾಕರಿಸುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಆದರೆ ಈಗ ದೇವೇಂದ್ರ ಫಡ್ನಾವಿಸ್ ಸರ್ಕಾರವು 2019ರ ಮೋಟಾರು ವಾಹನ ನಿಯಮಗಳ ತಿದ್ದುಪಡಿಯ ಆಧಾರದ ಮೇಲೆ ಇದನ್ನು ಜಾರಿಗೆ ತರುತ್ತಿದೆ. ಈ ಸ್ಥಳೀಯ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಜೊತೆಗೆ ಮರಾಠಿ ಭಾಷೆಯನ್ನು ಮಾತನಾಡುವ ಜನರ ಉದ್ಯೋಗವನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ಶಿವಸೇನೆ, ಎಂಎನ್ಎಸ್ ಹೇಳಿವೆ.















