ಬೆಂಗಳೂರು, ಮೇ 30: ಜಾಗತಿಕ ಮಟ್ಟದಲ್ಲಿ ಇಸ್ರೇಲ್, ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ದೇಶೀಯ ಇಂಧನ ಮಾರುಕಟ್ಟೆಯ ಮೇಲೂ ಬೀಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಇಂಧನ ಬೆಲೆ ಹೆಚ್ಚಳವಾಗಿರುವುದು ವಾಹನ ಮಾಲೀಕರು ಹಾಗೂ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯಿಂದ ಸಂಕಷ್ಟಕ್ಕೀಡಾಗಿರುವ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್ಪೋರ್ಟರ್ಸ್ ಅಸೋಸಿಯೇಷನ್ (SIMTA) ಹಾಗೂ ಲಾರಿ ಮಾಲೀಕರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇಂಧನ ದರ ಏರಿಕೆಯ ಹೊರೆ ತಗ್ಗಿಸಲು ಮುಂದಿನ ಆರು ತಿಂಗಳವರೆಗೆ ಟೋಲ್ ಶುಲ್ಕ ಮತ್ತು ವ್ಯಾಟ್ (VAT) ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು. ಇಲ್ಲವಾದರೆ ಸರಕು ಸಾಗಣೆ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ದರವು 7.97 ರೂ. ಹಾಗೂ ಡೀಸೆಲ್ ಬೆಲೆ 7.81 ರೂ. ಹೆಚ್ಚಳ ಕಂಡಿದೆ. ಇದರ ಪರಿಣಾಮ ಲಾರಿ ಹಾಗೂ ಟ್ರಕ್ ಮಾಲೀಕರ ಕಾರ್ಯಾಚರಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಲಾರಿ ಮಾಲೀಕ ಶಿವಶಂಕರ್, “ಡೀಸೆಲ್ ದರ ನಿರಂತರ ಏರಿಕೆಯಿಂದ ವಾಹನ ನಿರ್ವಹಣೆ ದೊಡ್ಡ ಸವಾಲಾಗಿದೆ. ಕನಕಪುರದಿಂದ ಬೆಂಗಳೂರಿಗೆ 50 ಕೆಜಿ ತೂಕದ ಒಂದು ಚೀಲ ಸಾಗಿಸಲು ಈ ಹಿಂದೆ 50 ರೂ. ಪಡೆಯುತ್ತಿದ್ದೆವು. ಆದರೆ ಹೆಚ್ಚಿದ ವೆಚ್ಚದ ಕಾರಣ ಈಗ ಅದನ್ನು 70 ರೂ.ಗೆ ಏರಿಸುವ ಪರಿಸ್ಥಿತಿ ಎದುರಾಗಿದೆ” ಎಂದು ತಿಳಿಸಿದ್ದಾರೆ.
ಗ್ರಾಹಕರ ಮೇಲೂ ಬೀಳಲಿದೆ ಬೆಲೆ ಏರಿಕೆಯ ಹೊರೆ
ಲಾರಿ ಮಾಲೀಕರ ಸಂಘಟನೆ ತನ್ನ ಪತ್ರದಲ್ಲಿ, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಟೋಲ್ ದರ ಕಡಿತಗೊಳಿಸದಿದ್ದರೆ ಸಾಗಣೆ ಶುಲ್ಕ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಸಾರಿಗೆ ವೆಚ್ಚ ಏರಿಕೆಯಾಗುವುದರಿಂದ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿನ ವಸ್ತುಗಳ ಬೆಲೆಗಳ ಮೇಲೂ ನೇರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.ಈ ಕುರಿತು ಹೋಲ್ಸೇಲ್ ವ್ಯಾಪಾರಿ ಅಣ್ಣೋಜಿ ರಾವ್ ಆತಂಕ ವ್ಯಕ್ತಪಡಿಸಿ, “ಸಾಗಣೆ ವೆಚ್ಚ ಹೆಚ್ಚಾದರೆ ಧಾನ್ಯ, ತರಕಾರಿ ಸೇರಿದಂತೆ ಮಾರುಕಟ್ಟೆಗೆ ಬರುವ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಲಿದೆ. ಅಂತಿಮವಾಗಿ ಇದರ ಸಂಪೂರ್ಣ ಹೊರೆ ಸಾಮಾನ್ಯ ಗ್ರಾಹಕರ ಜೇಬಿನ ಮೇಲೆ ಬೀಳಲಿದೆ” ಎಂದು ಹೇಳಿದ್ದಾರೆ.
ಇಂಧನ ದರ ಏರಿಕೆಯ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಗಳಲ್ಲೂ ಏರಿಕೆ ಸಂಭವಿಸುವ ಸಾಧ್ಯತೆ ಇದ್ದು, ಈ ಸಮಸ್ಯೆಗೆ ಕೇಂದ್ರ ಸರ್ಕಾರ ಯಾವ ರೀತಿಯ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.















