ಬೆಂಗಳೂರು : ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷದ ವಿರುದ್ಧ ಯಾರೇ ನಡೆದುಕೊಂಡರೂ ಅದು ತಪ್ಪು ಅಂತ ಪರೋಕ್ಷವಾಗಿ ಸಚಿವ ಜಮೀರ್ ಅಹಮದ್ ವಿರುದ್ಧ ಕ್ರಮ ಆಗಬೇಕು ಅಂತ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಒತ್ತಾಯ ಮಾಡಿದ್ದಾರೆ.
ಜಮೀರ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ನಾಯಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾಕೆ ಕ್ರಮ ಆಗಬೇಕು? ಏನು? ಅಂತ ನನಗೇನು ಸಂಪೂರ್ಣ ಗೊತ್ತಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರು ಅಲ್ಲ. ಪಕ್ಷದ ವಿರುದ್ಧ ಯಾರೇ ನಡೆದರೂ ತಪ್ಪು. ಸಿದ್ದರಾಮಯ್ಯ ಆಗಲಿ, ಡಿಕೆ ಶಿವಕುಮಾರ್ ಆಗಲಿ, ಜಮೀರ್ ಆಗಲಿ, ಬಾಲಕೃಷ್ಣ ಆಗಲಿ ಯಾರೇ ಪಕ್ಷದ ವಿರುದ್ಧ, ಪಕ್ಷದ ಬೆಳವಣಿಗೆಗೆ ಅಡಚಣೆ ಮಾಡಿದ್ರೆ ಎಲ್ಲರ ಮೇಲೆ ಕ್ರಮ ಆಗಬೇಕು ಎಂದಿದ್ದಾರೆ.
ಅಲ್ಪಸಂಖ್ಯಾತರನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿ, ನಾವು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಇರೋ ಕಡೆ ಪ್ರಚಾರ ಮಾಡಿರಲಿಲ್ಲ. ಇಲ್ಲಿ ಅಲ್ಪಸಂಖ್ಯಾತರಿಂದ ಗೊಂದಲ ಆಗಿದೆ. ಆದರೆ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿಲ್ಲ, ಸಮಸ್ಯೆ ಬಂದಿದೆ ಅದಕ್ಕೆ ಪರಿಹಾರ ಹುಡುಕಬೇಕು ಅಷ್ಟೇ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರಲ್ಲಿ ಒಡಕು ಮೂಡಿಸೋ ಸಂಶಯ ಮೂಡಿದೆ ಎಂಬ ತನ್ವೀರ್ ಸೇಠ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ತನ್ವೀರ್ ಸೇಠ್ ಅಭಿಪ್ರಾಯ ಇರಬಹುದು. ಅವರನ್ನು ಕೇಳಿ. ಜಮೀರ್ ಬೇರೆ ನಾಯಕರನ್ನ ಬೆಳೆಯಲು ಬಿಡ್ತಿಲ್ಲ ಅಂತ ಹೀಗಾಗಿ ಜಮೀರ್ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂಬ ವಿಚಾರ ಮಾಧ್ಯಮಗಳ ಸೃಷ್ಟಿ ಅಷ್ಟೆ. ಬೇರೆ ಯಾರು ಹೇಳಿಲ್ಲ. ರಿಜ್ವಾನ್ ಅರ್ಷದ್ ಜಮೀರ್ ಹೆಸರು ಹೇಳಿಲ್ಲ. ಯಾರು ಅಂತ ನೀವೇ ಕೇಳಬೇಕಿತ್ತು ಎಂದು ತಿಳಿಸಿದ್ದಾರೆ.
ದೊರೆ ಮೇಲೆ ಕ್ರಮ ಇಲ್ಲ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದಿದ್ದರು, ಅದಕ್ಕೆ ಡಿಕೆಶಿ ಹೋಗಿದ್ರು. ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಯಾರು ಅಂತ ಡಿಕೆಶಿ ಸದ್ಗುರುಗೆ ಪಾಠ ಹೇಳಿ ಬಂದಿದ್ದಾರೆ.
ರಾಹುಲ್ ಗಾಂಧಿಯಿಂದ ಬೆಳೆದವರು, ರಾಹುಲ್ ಗಾಂಧಿ ಪಕ್ಷದವರು, ನೀವು ಇಲ್ಲಿಗೆ ನಮ್ಮನ್ನ ಕರೆಯೋಕೆ ಶಕ್ತಿ ರಾಹುಲ್ ಗಾಂಧಿ ಕೊಟ್ಟಿರೋದು ಅಂತ ಹೇಳಿ ಬಂದಿದ್ದಾರೆ. ದೊರೆಗೆ ದಂಡವಿಲ್ಲ ಅಂದರೆ ಎಲ್ಲಾ ಪಕ್ಷದಲ್ಲೂ ಅದೇ ಹಣೆಬರಹ ಅಂತ ಡಿಕೆ ಶಿವಕುಮಾರ್ರನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.















