ಮನೆ ಕ್ರೀಡೆ ಪಂದ್ಯದ ವೇಳೆ “ದೋಸೆ ಇಡ್ಲಿ” ಹಾಡು ಪ್ರಸಾರ; ಬಿಸಿಸಿಐಗೆ RCB ವಿರುದ್ಧ CSK ದೂರು

ಪಂದ್ಯದ ವೇಳೆ “ದೋಸೆ ಇಡ್ಲಿ” ಹಾಡು ಪ್ರಸಾರ; ಬಿಸಿಸಿಐಗೆ RCB ವಿರುದ್ಧ CSK ದೂರು

0

ಬೆಂಗಳೂರು : ಏ.5ರಂದು ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವೆ ನಡೆದ ಪಂದ್ಯದ ವೇಳೆ “ದೋಸೆ, ಇಡ್ಲಿ, ಚಟ್ನಿ” ಹಾಡು ಪ್ರಸಾರ ಮಾಡಿದ್ದಕ್ಕಾಗಿ ಆರ್‌ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ `ದೋಸೆ, ಇಡ್ಲಿ, ಚಟ್ನಿ’ ಹಾಡನ್ನು ಪ್ರಸಾರ ಮಾಡಿದ್ದು ಸರಿಯಾಗಿರಲಿಲ್ಲ. ಅಲ್ಲದೇ ಚೆನ್ನೈ ತಂಡದ ಆಟಗಾರರ ಬಗ್ಗೆ ಟೀಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್ ಅವರು ಈ ಬಗ್ಗೆ ಮಾತನಾಡಿ, ಪಂದ್ಯದ ವೇಳೆ ಸಾಮಾನ್ಯವಾಗಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಹಾಡು ಪ್ರಸಾರ ಮಾಡುತ್ತಾರೆ. ಜೊತೆಗೆ ತವರಿನಲ್ಲಿ ಆಡುವ ತಂಡಗಳಿಗೆ ಹಾಡುಗಳು ಬೆಂಬಲ ನೀಡುತ್ತವೆ. ಆದರೆ ಎದುರಾಳಿ ತಂಡಗಳನ್ನು ಟೀಕಿಸುವಂತಿರಬಾರದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಕಿದ ಹಾಡು ವಿಭಿನ್ನ ರೀತಿಯಲ್ಲಿತ್ತು. ನಮ್ಮ ಆಟಗಾರರ ವಿರುದ್ಧ ಕೆಲ ಕಾಮೆಂಟ್ ಮಾಡಿದ್ದಾರೆ. ಇದನ್ನು ಪರಿಗಣಿಸಿ, ಪರಿಶೀಲಿಸಲು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಫ್ರಾಂಚೈಸಿ ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಹಾಡನ್ನು ಹಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಹಾಡಿನಲ್ಲಿ ಚೆನ್ನೈ ಬಗ್ಗೆ ಯೋಚಿಸಿದಾಗ ಮನಸ್ಸಿನಲ್ಲಿ ಮೊದಲಿಗೆ ಬರುವುದೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಅವರು ಹಾಡಿದ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಾದ ಬಳಿಕ ಚೆಪಾಕ್‌ನಲ್ಲಿ ನಡೆಯುತ್ತಿದ್ದ ಸಿಎಸ್‌ಕೆ-ಆರ್‌ಸಿಬಿ ಪಂದ್ಯದ ವೇಳೆ ಜಿತೇಶ್ ಶರ್ಮಾ ಔಟ್ ಆದಾಗ ಅದೇ ಹಾಡನ್ನು ಪ್ರಸಾರ ಮಾಡಿದ್ದರು. ಬಳಿಕ ಸಿಎಸ್‌ಕೆ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ, ಎದುರಾಳಿ ಆಟಗಾರರು ಹಾಗೂ ಅಭಿಮಾನಿಗಳ ಬಗ್ಗೆ ಕಾಮೆಂಟ್ ಮಾಡದಂತೆ ಡಿಜೆಗೆ ಸೂಚಿಸಿತ್ತು.