ಮನೆ ರಾಜ್ಯ ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ಮರಗಳು

ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ಮರಗಳು

0

ಚಿಕ್ಕಮಗಳೂರು : ಬಿಸಿಲ ಬೇಗೆಯಲ್ಲಿ ಬೆಂದಿದ್ದ ಕಾಫಿನಾಡು ಮತ್ತು ಮಲೆನಾಡಿಗೆ ವರುಣ ತಂಪೆರೆದಿದ್ದಾನೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ, ತಡರಾತ್ರಿ ಭಾರೀ ಮಳೆಯಾಗಿದೆ. ಮಳೆ ಹೊಡೆತಕ್ಕೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಕಾಫಿನಾಡು ಮಳೆ ಅಬ್ಬರಕ್ಕೆ ಕಗ್ಗತ್ತಲಲ್ಲಿ ಮುಳುಗಿದೆ. ಕಳೆದ ರಾತ್ರಿ ಮೂಡಿಗೆರೆ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಗೆ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೂಡಿಗೆರೆ ಪಟ್ಟಣ ಬಿಟ್ಟು ಇಡೀ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಭಾರೀ ಗಾಳಿ, ಮಳೆಗೆ ಮೂಡಿಗೆರೆಯಲ್ಲಿ ನೂರಾರು ಮರಗಳು ನೆಲಕ್ಕುರುಳಿವೆ.

ಧರೆಗುರುಳಿದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಕಂಬ ತೆರವುಗೊಳಿಸಲು ಸ್ಥಳೀಯರು ಮುಂದಾಗಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್-ಮತ್ತಿಕಟ್ಟೆ ಮಾರ್ಗದಲ್ಲಿ ಘಟನೆ ನಡೆದಿದೆ.

ಶಿವಮೊಗ್ಗ – ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಭಾಗದ ಕೆಲವೆಡೆ ಭಾರೀ ಮಳೆಯಾಗಿದೆ. ಮಳೆ ಅಬ್ಬರಕ್ಕೆ ಬೆಜ್ಜವಳ್ಳಿ ಬಳಿಯ ಗಬಡಿ ಗ್ರಾಮದಲ್ಲಿ ಮನೆಯ ಹೆಂಚುಗಳು ಹಾರಿಹೋಗಿವೆ. ಅಡಿಕೆ ಮರಗಳು ಮುರಿದು ಬಿದ್ದಿವೆ. ಗಾಳಿಯ ರಭಸಕ್ಕೆ 20ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ.

ಗಾಳಿ, ಮಳೆ, ಸಿಡಿಲಿಗೆ ಗೌರಮ್ಮ ಎಂಬವರ ಮನೆ ಮೇಲೆ ತೆಂಗಿನಮರ ಬಿದ್ದಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಒಂದೇ ರಾತ್ರಿಯ ಮಳೆಗೆ ಮೂಡಿಗೆರೆ ತಾಲೂಕು ಅಕ್ಷರಶಃ ಕಂಗಾಲಾಗಿದೆ.