ಮೈಸೂರು : ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯವಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮಹಾ ನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿದೆ.
ಹೀಗಾಗಿ ಚುನಾವಣೆ ನಡೆಸುತ್ತಿಲ್ಲ. ಸಿಎಂ ಹಾಗೂ ಸಿಎಂ ಪುತ್ರ ಮಾತ್ರ ಅಧಿಕಾರದಲ್ಲಿ ಇದ್ದರೆ ಸಾಲದು. ಸ್ಥಳೀಯ ಮುಖಂಡರಿಗೂ ಅಧಿಕಾರ ಬೇಕು ಎಂದು ಕಿಡಿಕಾರಿದರು. ಜಿಟಿಡಿ ನಮ್ಮ ಪಕ್ಷದಲ್ಲಿ ಇಲ್ಲ. ಅವರ ಬಗ್ಗೆ ಏನೂ ಕೇಳಬೇಡಿ. ಹೆಚ್‌ಡಿ ಕುಮಾರಸ್ವಾಮಿ ಅವರೇ ಜಿಟಿಡಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಸಮಾರೋಪ ಮಾಡುತ್ತೇವೆ ಎಂದರು.
ನಮ್ಮದು ಕುಟುಂಬ ರಾಜಕಾರಣ ಅಲ್ಲ ಎಂಬ ಸಿಎಂ ಪುತ್ರನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನ ಪರಿಷತ್ ಸದಸ್ಯ, ಆಶ್ರಯ ಸಮಿತಿ ಸದಸ್ಯ, ಗ್ರೇಟರ್ ಬೆಂಗಳೂರು ಸಮಿತಿ ಸದಸ್ಯ ಎಲ್ಲವೂ ಯತೀಂದ್ರ ಆಗಿದ್ದಾರೆ. ಇದಕ್ಕಿಂತಾ ಕುಟುಂಬ ರಾಜಕಾರಣ ಬೇಕಾ ಎಂದು ತಿರುಗೇಟು ನೀಡಿದರು. ಜೆಡಿಎಸ್‌ಗೆ ಪಕ್ಷವೇ ಒಂದು ಕುಟುಂಬ. ಜೆಡಿಎಸ್‌ನಿಂದ ಬೆಳೆದು ಜೆಡಿಎಸ್‌ಗೆ ಬೈಯುವ ನಾಯಕರು ಹೆಚ್ಚಾಗಿದ್ದಾರೆ. ಹೀಗಾಗಿ ಹೆಚ್.ಡಿ. ದೇವೇಗೌಡರ ಕುಟುಂಬದವರನ್ನು ಹೆಚ್ಚಾಗಿ ಪಕ್ಷದಲ್ಲಿ ಬೆಳೆಸುತ್ತಿದ್ದೇವೆ ಎಂದು ಹೇಳಿದರು.














