ಬೇಸಿಗೆಯ ಧಗೆಗೆ ಪದೇ ಪದೇ ಬಾಯಾರಿಕೆಯಾಗುವುದು ಸಹಜ. ಉಷ್ಣತೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ಆದರೆ ಬೇಸಿಗೆಯಲ್ಲಿ ಬಿಸಿ ನೀರಿನ ಸೇವನೆ ಮಾಡಲು ಯಾರೂ ಇಷ್ಟಪಡುವುದಿಲ್ಲ. ಹೆಚ್ಚಿನವರು ತಣ್ಣೀರನ್ನೇ ಕುಡಿಯಲು ಇಷ್ಟಪಡುತ್ತಾರೆ. ಬಿಸಿ ನೀರು ಅಥವಾ ಸಾಮಾನ್ಯ ತಾಪಮಾನದಲ್ಲಿರುವ ನೀರು ಅಂದರೆ ಉಗುರು ಬೆಚ್ಚಗಿನ ನೀರು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಾದರೂ ಕೂಡ ಬಿಸಿ ನೀರು ಕುಡಿಯಲು ಮನಸ್ಸು ಬರುವುದಿಲ್ಲ.
ಹಾಗಾಗಿ ಫ್ರಿಡ್ಜ್ ನಲ್ಲಿಟ್ಟ ಐಸ್ ಆಗಿರುವ ನೀರು, ತಂಪಾದ ನೀರು, ಈ ರೀತಿ ಅರೆಕ್ಷಣಕ್ಕೆ ಖುಷಿ ಕೊಡುವುದನ್ನೇ ಕುಡಿಯುತ್ತಾರೆ. ಹಾಗಾದರೆ ಆರೋಗ್ಯ ತಜ್ಞರ ಪ್ರಕಾರ ಈ ಸಮಯದಲ್ಲಿ ಯಾವ ರೀತಿಯ ನೀರು ಆರೋಗ್ಯಕ್ಕೆ ಒಳ್ಳೆಯದು, ಬಿಸಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನವೇನು ತಿಳಿದುಕೊಳ್ಳಿ.
ತಣ್ಣೀರು ಕುಡಿಯುವುದರಿಂದಾಗುವ ಪರಿಣಾಮ; ಬೇಸಿಗೆಯಲ್ಲಿ ತಣ್ಣೀರು ತಕ್ಷಣ ತಂಪು ನೀಡಿದರೂ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಣ್ಣೀರು ದೇಹದ ಒಳಗಿನ ತಾಪಮಾನವನ್ನು ತಕ್ಷಣ ಕಡಿಮೆ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳಬಹುದು. ವಿಶೇಷವಾಗಿ ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣ ಸಮಸ್ಯೆಗಳು ಉಂಟಾಗಬಹುದು.
ಬಿಸಿನೀರು ಕುಡಿಯುವುದರಿಂದಾಗುವ ಲಾಭಗಳು; ಸಾಮಾನ್ಯವಾಗಿ ಬಿಸಿ ಅಥವಾ ತುಸು ಬೆಚ್ಚಗಿನ ನೀರು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ. ಇದು ದೇಹದ ಒಳಗಿನ ರಕ್ತಸಂಚಾರವನ್ನು ಸುಧಾರಿಸುತ್ತದೆ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿಯಾಗುತ್ತದೆ. ಬೇಸಿಗೆಯಲ್ಲೂ ಸಹ ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದು ದೇಹದ ಮೆಟಾಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸಾಮಾನ್ಯ ತಾಪಮಾನದಲ್ಲಿರುವ ನೀರೇ ಉತ್ತಮ ಆಯ್ಕೆ: ಬೇಸಿಗೆಯಲ್ಲಿ ತಣ್ಣೀರು ಅಥವಾ ತುಂಬಾ ಬಿಸಿ ನೀರಿಗಿಂತ ಸಾಮಾನ್ಯ ತಾಪಮಾನದಲ್ಲಿರುವ ನೀರು ಅಂದರೆ ಉಗುರು ಬೆಚ್ಚಗಿನ ನೀರು ಕುಡಿಯುವುದು ಬಹಳ ಉತ್ತಮ. ಇದು ದೇಹವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲ. ವಿಶೇಷವಾಗಿ ಹೊರಗೆ ಹೋಗಿ ಬಂದ ತಕ್ಷಣ ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು.
ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು? – ದೇಹದಲ್ಲಿ ನೀರಿನ ಕೊರತೆ ಆಗದಂತೆ ತಡೆಯಲು ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದು ಉತ್ತಮ. ಹೆಚ್ಚು ಬೆವರು ಬರುವವರು ಇನ್ನಷ್ಟು ನೀರು ಕುಡಿಯಬೇಕು. ಜೊತೆಗೆ ಹಣ್ಣಿನ ರಸ, ಜ್ಯೂಸ್, ಎಳನೀರು ಮುಂತಾದವುಗಳನ್ನು ಸಹ ಸೇವಿಸಬಹುದು.















