ನಂದೂರ್ಬಾರ್ (ಮಹಾರಾಷ್ಟ್ರ) : ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಪುರದಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತವು ಸೋಂಕು ಹರಡುವ ವಲಯದಲ್ಲಿ ಪಕ್ಷಿಗಳನ್ನು ಕೊಲ್ಲುವ ಮತ್ತು ನಿಯಂತ್ರಣ ಕಾರ್ಯಾಚರಣೆಗೆ ಮುಂದಾಗಿದೆ. ಸೋಂಕು ಪೀಡಿತ ಕೋಳಿ ಸಾಕಣೆ ಕೇಂದ್ರದಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಗೆ ಆರ್ಟಿ -ಪಿಸಿಆರ್ ಪರೀಕ್ಷೆಗೆ ಆದೇಶಿಸಿಸಲಾಗಿದೆ. ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳನ್ನು ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆರೋಗ್ಯ ಇಲಾಖೆ ಒಟ್ಟು ಎಂಟು ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ. ಹಕ್ಕಿ ಜ್ವರದಿಂದ ಮಾನವ ಸೋಂಕು ಪತ್ತೆಹಚ್ಚಲು ಈ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ತಪಾಸಣೆಗಾಗಿ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಸೋಂಕಿನ ಸಂಭಾವ್ಯ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನವಪುರ ಪ್ರದೇಶದಲ್ಲಿ ಸೋಂಕು ಪೀಡಿತ ಕೋಳಿ ಸಾಕಣೆ ಕೇಂದ್ರಗಳಲ್ಲಿ ಅವುಗಳನ್ನು ದೊಡ್ಡ ಪ್ರಮಾಣದ ಕೊಲ್ಲುವ ಕಾರ್ಯಾಚರಣೆಗಳು ನಡೆಯುತ್ತಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಂದಾಯ ಆಡಳಿತವು ಜಂಟಿ ಪ್ರಯತ್ನ ನಡೆಸಿದೆ. ಕೋಳಿ ಸಾಕಣೆ ಕೇಂದ್ರಗಳ ಆವರಣದಲ್ಲಿ ನೈರ್ಮಲ್ಯೀಕರಣ, ಸೋಂಕು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಪೀಡಿತ ಪ್ರದೇಶಗಳಲ್ಲಿನ ನಾಗರಿಕರು ಜಾಗರೂಕರಾಗಿರಲು ಆರೋಗ್ಯ ಇಲಾಖೆ ಒತ್ತಾಯಿಸಿದೆ. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಿದೆ.
ಹಾಗೂ ಕೋಳಿ ಸಾಕಣೆ ಕೇಂದ್ರಗಳ ಸುತ್ತಮುತ್ತ ಅನಗತ್ಯ ಜನಸಂದಣಿಯನ್ನು ತಪ್ಪಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಆಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಹಕ್ಕಿ ಪಕ್ಷಿ ಜ್ವರ ಮಾನವರಿಗೆ ಹರಡುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ವಿಶೇಷ ತಂಡಗಳನ್ನು ನಿಯೋಜಿಸಿದೆ. ಕೋಳಿ ಸಾಕಣೆ ಕೇಂದ್ರದ ನೌಕರರು ಮತ್ತು ಕೊಲ್ಲುವ ತಂಡಗಳ ಸದಸ್ಯರ ನಿಯಮಿತ ಆರೋಗ್ಯ ತಪಾಸಣೆಗಳನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ. ಸೋಂಕಿತ ಪ್ರದೇಶಗಳಲ್ಲಿ ಔಷಧಗಳು, ಮುಖವಾಡಗಳು, ಸ್ಯಾನಿಟೈಸರ್ಗಳು ಮತ್ತು ಪಿಪಿಇ ಕಿಟ್ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರವೀಂದ್ರ ಸೋನಾವಾನೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

















