ಮನೆ ರಾಜ್ಯ ಮೈಸೂರಿನಲ್ಲಿ ಹೂಡಿಕೆ ಮಾಡಲು 15 ಕಂಪನಿಗಳು ಮುಂದೆ; ನವೋದ್ಯಮಗಳಿಗೆ ಜೈ ಎಂದ ಬಂಡವಾಳಗಾರರು..!

ಮೈಸೂರಿನಲ್ಲಿ ಹೂಡಿಕೆ ಮಾಡಲು 15 ಕಂಪನಿಗಳು ಮುಂದೆ; ನವೋದ್ಯಮಗಳಿಗೆ ಜೈ ಎಂದ ಬಂಡವಾಳಗಾರರು..!

0

ಮೈಸೂರು : ಮೈಸೂರಿನಲ್ಲಿ ನಡೆದ ‘ಟೈಕಾನ್ ಮೈಸೂರು-2026’ ಶೃಂಗಸಭೆಯ ಮೊದಲ ದಿನ 15 ನವೋದ್ಯಮಗಳಿಗೆ ಒಟ್ಟು 83 ಲಕ್ಷ ರೂ. ಹೂಡಿಕೆ ಹರಿದು ಬಂದಿದೆ. 120ಕ್ಕೂ ಹೆಚ್ಚು ಉದ್ಯಮಿಗಳು ವಿವಿಧ ಕ್ಷೇತ್ರಗಳ ಯೋಜನೆಗಳನ್ನು ಪ್ರಸ್ತುತಪಡಿಸಿದರು. ದೇಶ-ವಿದೇಶಗಳ ಹೂಡಿಕೆದಾರರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಮೈಸೂರಿನ ಸಮಗ್ರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಉದ್ಯಮವನ್ನು ಬೆಳೆಸುವ ಕುರಿತು ಮಹತ್ವದ ಚರ್ಚೆಗಳು ನಡೆದವು. ಮೈಸೂರು: ದಿ ಮೈಸೂರು ಅಸೋಸಿಯೇಷನ್‌, ಟೈ ಮೈಸೂರು ವತಿಯಿಂದ ಶುಕ್ರವಾರ ನಡೆದ ”ಟೈಕಾನ್‌ ಮೈಸೂರು-2026” ಮೊದಲ ದಿನದ ಶೃಂಗಸಭೆಯಲ್ಲಿ 15 ನವೋದ್ಯಮಗಳಿಗೆ 83 ಲಕ್ಷ ರೂ. ಹೂಡಿಕೆ ಮಾಡಲು 15 ಕಂಪನಿಗಳು ಮುಂದೆ ಬಂದಿವೆ.

ಮೈಸೂರಿನ ವಿಜಯನಗರದ ಜೆಸಿಎಸಿ ಕೇಂದ್ರದಲ್ಲಿ ಆರಂಭಧಿವಾದ ಮೂರು ದಿನಗಳ ಶೃಂಗಸಭೆಯಲ್ಲಿ ದೇಶ ವಿದೇಶಗಳಿಂದ 15ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಿದ್ದಾರೆ. ಸ್ಟಾರ್ಟ್‌ ಅಪ್‌ ಕಂಪನಿ ಆರಂಭಿಸುವ 120ಕ್ಕೂ ಹೆಚ್ಚು ಮಂದಿ, ತಾವು ಆರಂಭಿಸಲು ಉದ್ದೇಶಿಸಿರುವ ಉದ್ದಿಮೆ, ಅದರ ಅನಿವಾರ್ಯತೆ, ಅದರಿಂದ ಬರುವ ಲಾಭ, ಅದಕ್ಕೆ ಬೇಕಾದ ವೆಚ್ಚ, ಅವರಲ್ಲಿರುವ ಮೂಲ ಆದಾಯ, ಮುಂದೆ ಉದ್ದಿಮೆಯನ್ನು ಹೇಗೆ ಲಾಭದಾಯಕವಾಗಿ ಬೆಳೆಸಲಾಗುತ್ತದೆ ಎಂಬುದರ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಇದನ್ನು ವೀಕ್ಷಿಸಿದ 15 ಬಂಡವಾಳಗಾರರು ಈ ನವೋದ್ಯಮಿಗಳಿಗೆ ನಾನಾ ಪ್ರಶ್ನೆಗಳನ್ನು ಕೇಳಿ ಅವರ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಂಡು ತಮ್ಮ ಸಹಕಾರ ನೀಡುವ ಭರವಸೆ ನೀಡಿದರು.

ಹೀಗೆ ಸುಮಾರು 15 ನವೋದ್ಯಮಗಳಿಗೆ 83 ಲಕ್ಷ ರೂ. ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆಹಾರ, ಕೃಷಿ, ಕೈಗಾರಿಕೆ, ಐಟಿ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊಸ ಉದ್ಯಮ ಆರಂಭಿಸಲು ಹೊಸ ತಂಡಗಳು ತಮ್ಮದೇ ಯೋಜನೆ ರೂಪಿಸಿಕೊಂಡು ಅದನ್ನು ಹೇಗೆ ಸಾಕಾರಗೊಳಿಸುತ್ತೇವೆ ಎಂಬುದನ್ನು ಒಳಗೊಂಡ ವಿಡಿಯೋ ದಾಖಲೀಕರಣವನ್ನು ಪಿಪಿಟಿ ಮೂಲಕ ಹೂಡಿಕೆದಾರರಿಗೆ ತೋರಿಸಿದರು. ಬಳಿಕ ಮೈಸೂರಿನಲ್ಲಿರುವ ಕಾರ್ಖಾನೆಗಳು, ನಾನಾ ಉದ್ದಿಮೆಗಳ ಪ್ರಮುಖರನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹೂಡಿಕೆಗಳನ್ನು ತಂದು ಮೈಸೂರನ್ನು ಹೇಗೆ ಬೆಳೆಸಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು.

ಬಳಿಕ ಚಂಡೆ, ಯಕ್ಷಗಾನ, ಕಂಸಾಳೆ, ವೀರಗಾಸೆ ಸೇರಿ ನಾಲ್ಕು ಕಲೆಗೆ ಸಂಬಂಧಿಸಿದಂತೆ ಕಲಾವಿದರಿಗೆ ಅನುಕೂಲವಾಗು ವಂತೆ ಹೇಗೆ ಸಾಂಸ್ಕೃತಿಕ ಉದ್ಯಮವನ್ನು ಕಟ್ಟಬಹುದು ಎಂಬುದರ ಕುರಿತು ಸಹ ವಿಚಾರ ಮಂಥನ ನಡೆಯಿತು. ಮೈಸೂರಿಗೆ ಇರುವ ಋುಣಾತ್ಮಕ ಅಪವಾದಗಳನ್ನು ಬಿಟ್ಟು ಅದರಿಂದ ಹೊರತಾದ ಯಶಸ್ವಿ ಮೈಸೂರನ್ನು ಬೆಳೆಸುವುದು ಹೇಗೆ ಎಂಬುದರ ಕುರಿತು ಸಂಬಂಧಿಸಿದ ತಜ್ಞರನ್ನು ಒಳಗೊಂಡಂತೆ ಗೋಷ್ಠಿ ನಡೆಸಲಾಯಿತು. ಟೈಕಾನ್‌ ಮೈಸೂರು-2026 ಕಾರ್ಯಕ್ರಮಕ್ಕೆ ದೇಶ, ವಿದೇಶಗಳಿಂದ ಆಸಕ್ತರು ಭಾಗವಹಿಸಿದ್ದಾರೆ. ನೆದರ್‌ಲ್ಯಾಂಡ್‌, ಜಪಾನ್‌ನ ಕೌನ್ಸಲೇಟ್‌ ಜನರಲ್‌ಗಳು ಹಾಜರಿದ್ದರು. ಎಕ್ಸಲ್‌ ಸಾಫ್ಟ್‌ ಸಂಸ್ಥೆ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.