ಮನೆ ಸುದ್ದಿ ಜಾಲ ಝಾಂಬಿ ಡ್ರಗ್ಸ್ ಕೇಸ್‌ನಲ್ಲಿ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ...

ಝಾಂಬಿ ಡ್ರಗ್ಸ್ ಕೇಸ್‌ನಲ್ಲಿ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ

0

ಬೆಂಗಳೂರು : ಝಾಂಬಿ ಡ್ರಗ್ಸ್ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್‌ಗೆ ಸಂಕಷ್ಟ ಎದುರಾಗಿದೆ. ತಪ್ಪು ಅರಿವಾದ ಬಳಿಕ ವಿಡಿಯೋ ಡಿಲೀಟ್ ಮಾಡಿ ಕೈತೊಳೆದುಕೊಂಡಿದ್ರು. ಆದರೆ ಇದೀಗ ಬಾಗಲೂರು ಪೊಲೀಸರು ಡಿಲೀಟ್ ಆಗಿದ್ದ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪತ್ರ ಬರೆದಿದ್ದಾರೆ.

ಇದೇ ವಿಡಿಯೋವನ್ನು ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಕೂಡ ದುನಿಯಾ ವಿಜಯ್ ರೀತಿಯಲ್ಲಿ ವೈರಲ್ ವಿಡಿಯೋ ಶೇರ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದರು. ಅವರಿಗೂ ಈಗ ಸಂಕಷ್ಟ ಎದುರಾಗಲಿದೆ. ಝಾಂಬಿ ಡ್ರಗ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ ಶೇರ್ ಮಾಡಿದ್ದ ವಿಡಿಯೋ ರಿಟ್ರೀವ್ ಮಾಡಿಕೊಡುವಂತೆ ಬಾಗಲೂರು ಪೊಲೀಸರು ಇನ್‌ಸ್ಟಾಗ್ರಾಂ ಸಂಸ್ಥೆಗೆ ಪತ್ರ ಬರೆದಿದ್ದಾರೆ.

ವಿಡಿಯೋದ ಬಗ್ಗೆ ಪೂರ್ವಪರ ತಿಳಿಯದೇ ಸುಳ್ಳು ಮಾಹಿತಿ ಇರುವ ವಿಡಿಯೋ ಶೇರ್ ಮಾಡಿರುವ ಬಗ್ಗೆ ಸ್ಪಷ್ಟನೆ ಕೊಡಲು ಈವರೆಗೆ ಒಟ್ಟು 15 ಮಂದಿಗೆ ನೋಟಿಸ್ ಕೊಡಲಾಗಿದೆ. ಅದೇ ರೀತಿ ನಟ ದುನಿಯಾ ವಿಜಯ್ ಹಾಗೂ ಮಾಜಿ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಕೂಡ ಶೇರ್ ಮಾಡಿದ್ದು, ವಿಡಿಯೋ ರಿಟ್ರೀವ್ ಆಗುತ್ತಿದ್ದಂತೆ ನೋಟಿಸ್ ಕೊಡಲು ಬಾಗಲೂರು ಪೊಲೀಸರು ಚಿಂತನೆ ನಡೆಸಿದ್ದಾರೆ.

ಒಂದು ವೇಳೆ ಝಾಂಬಿ ಡ್ರಗ್ಸ್ ವೈರಲ್ ವಿಡಿಯೋ ರಿಟ್ರೀವ್ ಆಗಿ ಬಂದರೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್, ಮಾಜಿ ಐಪಿಎಸ್ ಭಾಸ್ಕರ್ ರಾವ್ ಇಬ್ಬರೂ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಮಾಹಿತಿಯೇ ಇಲ್ಲದೇ ವಿಡಿಯೋ ಅಪ್ಲೋಡ್ ಮಾಡಿದ್ದೇಕೆ ಎಂಬ ಬಗ್ಗೆ ಇಬ್ಬರನ್ನು ಪ್ರಶ್ನೆ ಮಾಡಲಿದ್ದಾರೆ.

ಇನ್ನು ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಿಂತಲ್ಲೇ ನಿಂತು ವಿಚಿತ್ರವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು. ವಿಡಿಯೋ ವೈರಲ್ ಬಳಿಕ ಬೆಂಗಳೂರಿನಲ್ಲಿ ಇಂತಹ ಯಾವುದೇ ಝಾಂಬಿ ಡ್ರಗ್ಸ್ ಪತ್ತೆಯಾಗಿಲ್ಲ. ಇದು ಕೇವಲ ವದಂತಿ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದರು. ಆ ಬಳಿಕ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಗಿಳಿದಿದ್ದಾರೆ. ಅದೇ ನಿಟ್ಟಿನಲ್ಲಿ ಈಗ ಡಿಲೀಟ್ ಮಾಡಿರುವ ವಿಡಿಯೋ ರಿಟ್ರೀವ್‌ಗೆ ಬಾಗಲೂರು ಪೊಲೀಸರು ಮುಂದಾಗಿದ್ದಾರೆ.