ಚೆನ್ನೈ : ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಎಐಡಿಎಂಕೆ ಪಕ್ಷವನ್ನ ಟೀಕಿಸುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ತಮ್ಮ ವಿರೋಧಿಗಳನ್ನ ಬೆದರಿಸುತ್ತಾರೆ, ʻಭಯೋತ್ಪಾದಿಸುತ್ತಾರೆʼ ಆ ಅರ್ಥದಲ್ಲಿ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, ಎಐಡಿಎಂಕೆಯನ್ನು ಟೀಕಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಬ್ಬ ಭಯೋತ್ಪಾದಕ ಎಂದು ಕರೆದಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಖರ್ಗೆ ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಖರ್ಗೆ ಹೇಳಿದ್ದೇನು? – ಎಐಡಿಎಂಕೆ ಪಕ್ಷವು ಮೋದಿ ಅವರೊಂದಿಗೆ ಹೇಗೆ ಸೇರಬಹುದು? ಮೋದಿ ಒಬ್ಬ ಭಯೋತ್ಪಾದಕ, ಅವರು ಸಮಾನತೆಯನ್ನ ನಂಬುವುದಿಲ್ಲ. ಅವರ ಪಕ್ಷಕ್ಕೂ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಈ ಜನ ಅವರೊಂದಿಗೆ ಸೇರುತ್ತಿದ್ದಾರೆ ಅಂದ್ರೆ, ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ ಎಂದು ಹೇಳಿದರು.
ಖರ್ಗೆ ಸ್ಪಷ್ಟನೆ ಏನು? – ಪ್ರಧಾನಿ ಮೋದಿ ವಿರುದ್ಧದ ತಮ್ಮ ‘ಭಯೋತ್ಪಾದಕ’ ಟೀಕೆಗೆ ಸ್ಪಷ್ಟನೆ ಕೇಳಿದಾಗ, ಕೇಂದ್ರ ಸಂಸ್ಥೆಗಳು ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದರಿಂದ ಪ್ರಧಾನಿ ಮೋದಿ ವಿರೋಧಿಗಳನ್ನ ʻಭಯೋತ್ಪಾದಿಸುತ್ತಾರೆʼ. ವಿರೋಧಿಗಳಿಗೆ ಬೆದರಿಕೆ ಹಾಕುತ್ತಾರೆ. ಆದಾಯ ತೆರಿಗೆ, ಇಡಿ ಮತ್ತು ಇತರ ತನಿಖಾ ಸಂಸ್ಥೆಗಳು ಅವರ ಕೈಯಲ್ಲಿವೆ. ಅದಕ್ಕಾಗಿ ಅವರು ಭಯ ಹುಟ್ಟಿಸುತ್ತಾರೆ. ನನ್ನ ಅರ್ಥ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ರು.














