ಮನೆ ಮನರಂಜನೆ 29ನೇ ವಯಸ್ಸಿಗೆ ಖ್ಯಾತ ನಟಿ ಅನುಮಾನಾಸ್ಪದ ಸಾವು – ನಿಧನಕ್ಕೂ ಮುನ್ನ ಏನಾಯ್ತು?

29ನೇ ವಯಸ್ಸಿಗೆ ಖ್ಯಾತ ನಟಿ ಅನುಮಾನಾಸ್ಪದ ಸಾವು – ನಿಧನಕ್ಕೂ ಮುನ್ನ ಏನಾಯ್ತು?

0

ಹರಿಯಾಣದ ಜನಪ್ರಿಯ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ ಅವರು ನೆನ್ನೆ (ಮಂಗಳವಾರ) ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅವರ ಸಾವು ಸಂಭವಿಸಿರುವುದು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ದಿವ್ಯಾಂಕಾ ಅವರ ಸಾವಿನ  ಕಾರಣ ಇನ್ನೂ ಬಹಿರಂಗವಾಗಿಲ್ಲ. ಸಾವಿನ ಬಗ್ಗೆ ಅನುಮಾನ ಮೂಡಿದೆ. ಇಂದು (ಬುಧವಾರ) ಬೆಳಿಗ್ಗೆ ಗಾಜಿಯಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ದಿವ್ಯಾಂಕಾ ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಸಹೋದರ ಹಿಮಾಂಶು, ‘ಮಂಗಳವಾರ ದಿವ್ಯಾಂಕಾ ಅವರಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತು. ಅವರು ಮನೆಯಲ್ಲೇ ಕೆಳಗೆ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ತಿಳಿಸಿದ್ದಾರೆ.

ದಿವ್ಯಾಂಕಾ ಸಿರೋಹಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 13 ಲಕ್ಷ ಫಾಲೋವರ್ಸ್‌ ಹೊಂದಿದ್ದ ಅವರು, ಸುಮಾರು 50ಕ್ಕೂ ಹೆಚ್ಚು ಹರಿಯಾಣ್ವಿ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಬಣ್ಣದ ಲೋಕದಲ್ಲಿ ಇನ್ನೂ ಮಿಂಚಬೇಕಿದ್ದ ಅವರು ಅಕಾಲಿಕ ಮರಣ ಹೊಂದಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ದಿವ್ಯಾಂಕಾ ಅವರ ಅಕಾಲಿಕ ಮರಣಕ್ಕೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ ತೀವ್ರ ಸಂತಾಪ ಸೂಚಿಸಿದೆ. ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆಯು, ‘ನಟಿ ಮತ್ತು ನೃತ್ಯಗಾರ್ತಿ ದಿವ್ಯಾಂಕಾ ಸಿರೋಹಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ನಮಗೆ ಆಘಾತವಾಗಿದೆ. ಅವರ ಸಾವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಹರಿಯಾಣ ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.

ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ದಿವ್ಯಾಂಕಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರತಿಭಾವಂತ ಕಲಾವಿದೆಯೊಬ್ಬರು ಇಷ್ಟು ಬೇಗ ನಿಧನರಾಗಿರುವುದು ಹರಿಯಾಣದ ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.