ಮನೆ ಅಂತಾರಾಷ್ಟ್ರೀಯ ಇಸ್ರೇಲ್-ಲೆಬನಾನ್ ಕದನ ವಿರಾಮ; ವಾರಗಳವರೆಗೆ ವಿಸ್ತರಣೆ – ಟ್ರಂಪ್‌ ಸಂಧಾನ ಯಶಸ್ವಿ..!

ಇಸ್ರೇಲ್-ಲೆಬನಾನ್ ಕದನ ವಿರಾಮ; ವಾರಗಳವರೆಗೆ ವಿಸ್ತರಣೆ – ಟ್ರಂಪ್‌ ಸಂಧಾನ ಯಶಸ್ವಿ..!

0

ವಾಷಿಂಗ್ಟನ್‌ : ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ಮೂರು ವಾರಗಳವರೆಗೆ ವಿಸ್ತರಣೆಯಾಗಿದೆ. ಎರಡೂ ದೇಶಗಳು ಕದನ ವಿರಾಮ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಶ್ವೇತಭವನದಲ್ಲಿ ಏ.23 ರಂದು ನಡೆದ ಎರಡನೇ ಸುತ್ತಿನ ಉನ್ನತ ಮಟ್ಟದ ಮಾತುಕತೆಗಳ ನಂತರ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಏಪ್ರಿಲ್ 16 ರಂದು ಮೊದಲ ಬಾರಿಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿತ್ತು.

ಎರಡೂ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಟ್ರಂಪ್‌ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಮೆರಿಕವು ಲೆಬನಾನ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಎರಡು ದೇಶಗಳ ನಡುವಿನ ಈ ಒಪ್ಪಂದವನ್ನು ಐತಿಹಾಸಿಕ ಕ್ಷಣ ಎಂದು ಟ್ರಂಪ್‌ ಬಣ್ಣಿಸಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಇದು ದೊಡ್ಡ ಹೆಜ್ಜೆಯಾಗಿದೆ.

ಮುಂಬರುವ ವಾರಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು ಶ್ವೇತಭವನಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಶಾಶ್ವತ ಶಾಂತಿಗಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಶಾಂತಿ ಮಾತುಕತೆಗಳ ನಡುವೆಯೂ ಇರಾನ್ ತನ್ನ ಹಿಜ್ಬುಲ್ಲಾ ಸಂಘಟನೆಗೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸಬೇಕು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡಚಣೆ ಉಂಟುಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಕದನ ವಿರಾಮ ಒಪ್ಪಂದವು ಕೇವಲ ದಾಳಿಯನ್ನು ನಿಲ್ಲಿಸುವುದಲ್ಲದೆ ಕೆಲವು ಪ್ರಮುಖ ಷರತ್ತನ್ನು ಒಳಗೊಂಡಿದೆ. ಇಸ್ರೇಲ್ ತನ್ನ ದೇಶದ ಮೇಲೆ ಸಂಭವನೀಯ ಅಥವಾ ಯೋಜಿತ ದಾಳಿಗಳು ನಡೆದರೆ ಅವುಗಳ ವಿರುದ್ಧ ‘ಆತ್ಮರಕ್ಷಣೆಗಾಗಿ’ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.
ಲೆಬನಾನ್ ಸರ್ಕಾರವು ತನ್ನ ಭೂಪ್ರದೇಶದಿಂದ ಹಿಜ್ಬುಲ್ಲಾ ಅಥವಾ ಯಾವುದೇ ಇತರ ಸಶಸ್ತ್ರ ಗುಂಪುಗಳು ಇಸ್ರೇಲ್ ಮೇಲೆ ದಾಳಿ ನಡೆಸದಂತೆ ತಡೆಯಲು ಕ್ರಮಕೈಗೊಳ್ಳಬೇಕೆಂದು ಒಪ್ಪಂದ ಹೇಳುತ್ತದೆ.

ಕದನ ವಿರಾಮ ಜಾರಿಯಲ್ಲಿದ್ದರೂ ಸಹ ಗಡಿಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ದಾಳಿಗಳು ಮತ್ತು ಉಲ್ಲಂಘನೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಲೆಬನಾನ್‌ನಲ್ಲಿ ‘ಬಫರ್ ಝೋನ್’ನಲ್ಲಿ ಘರ್ಷಣೆಗಳು ನಡೆಯುತ್ತಿವೆ. ಏಪ್ರಿಲ್ 22 ರಂದು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಪತ್ರಕರ್ತರೊಬ್ಬರು ಸೇರಿದಂತೆ ಐವರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.