ಬಳ್ಳಾರಿ : ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಕಾರ್ಮಿಕರಿಗೆ ಹೊಸ ಕನಿಷ್ಠ ವೇತನವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ ಈ ವೇತನವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಾಸಿಕ ಕನಿಷ್ಠ ವೇತನ ಸರಾಸರಿ 19,000 ರೂಪಾಯಿಗಳಷ್ಟಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧವಾಗಿದ್ದು, ‘ಅಂಬೇಡ್ಕರ್ ಸಹಾಯ ಹಸ್ತ’ ಎಂಬಂತೆಯೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಡೆಲಿವರಿ ಸಿಬ್ಬಂದಿಗಳ ಹಿತರಕ್ಷಣೆಗಾಗಿ ಮಸೂದೆ ಮಂಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.
ಚಾಲಕರು ಮತ್ತು ಕ್ಲೀನರ್ಗಳ ಕಲ್ಯಾಣಕ್ಕಾಗಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಡೂರು ಶಾಸಕಿ ಇ. ಅನ್ನಪೂರ್ಣ ಅವರು ತಾಲೂಕಿನ 175 ಶಾಲೆಗಳ ಪೈಕಿ 65 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಸಂಸದ ಇ. ತುಕಾರಾಂ ಮಾತನಾಡಿ, ‘ಕ್ಲಿನಿಕ್ ಆನ್ ವೀಲ್ಸ್’ ಯೋಜನೆಯಡಿ 8.3 ಲಕ್ಷ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದರು.















