ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 14 ಪ್ರಯಾಣಿಕರು ಸಾವನ್ನಪ್ಪಿದ್ದು, 84ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೋಮವಾರ (ಏಪ್ರಿಲ್ 27) ತಡರಾತ್ರಿ ಈ ದುರ್ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
ರಾಜ್ಯ ರೈಲ್ವೆ ನಿರ್ವಾಹಕ ಸಂಸ್ಥೆಯಾದ ಪಿಟಿ ಕೆರೆಟಾ ಅಪಿ ಇಂಡೋನೇಷ್ಯಾ ನೀಡಿರುವ ಮಾಹಿತಿಯ ಪ್ರಕಾರ, ಪಶ್ಚಿಮ ಜಾವಾದ ಪೂರ್ವ ಬೆಕಾಸಿ ನಿಲ್ದಾಣದ ಬಳಿ ಸ್ಥಳೀಯ ಕಾಲಮಾನ ರಾತ್ರಿ ಸುಮಾರು 8:00 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಮೊದಲು ‘ಗ್ರೀನ್ SM ಇಂಡೋನೇಷ್ಯಾ’ ನಿರ್ವಹಿಸುತ್ತಿದ್ದ ಎಲೆಕ್ಟ್ರಿಕ್ ಟ್ಯಾಕ್ಸಿಯೊಂದು ಬುಲಕ್ ಕಪಲ್ ಪ್ರದೇಶದ ಲೆವೆಲ್ ಕ್ರಾಸಿಂಗ್ನಲ್ಲಿ ಸ್ಥಗಿತಗೊಂಡಿತ್ತು. ಜಕಾರ್ತಾ ಕಡೆಗೆ ಹೋಗುತ್ತಿದ್ದ ಕಮ್ಯೂಟರ್ಲೈನ್ ರೈಲು ಈ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ಡಿಕ್ಕಿಯ ಪರಿಣಾಮವಾಗಿ ಕಮ್ಯೂಟರ್ ರೈಲು ಬೆಕಾಸಿ ಮತ್ತು ಬೆಕಾಸಿ ತಿಮೂರ್ ನಿಲ್ದಾಣಗಳ ನಡುವೆ ತುರ್ತು ನಿಲುಗಡೆಗೆ ಒಳಗಾಗಿ ಹಳಿಯ ಮೇಲೆ ಸಿಲುಕಿಕೊಂಡಿತ್ತು.
ಇದೇ ವೇಳೆ ಅದೇ ಹಳಿಯಲ್ಲಿ ವೇಗವಾಗಿ ಬಂದ ‘ಅರ್ಗೋ ಬ್ರೋಮೋ ಅಂಗ್ರೆಕ್‘ ಎಕ್ಸ್ಪ್ರೆಸ್ ರೈಲು, ಸ್ಟಾಪ್ ಸಿಗ್ನಲ್ ಇದ್ದರೂ ಅದನ್ನು ಗಮನಿಸದೇ ನಿಂತಿದ್ದ ಕಮ್ಯೂಟರ್ ರೈಲಿನ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಈ ಡಿಕ್ಕಿಯ ತೀವ್ರತೆಗೆ ಪ್ರಯಾಣಿಕ ರೈಲಿನ ಹಿಂಭಾಗದ ಬೋಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಸ್ಥಳದಲ್ಲೇ 14 ಮಂದಿ ಪ್ರಾಣ ಕಳೆದುಕೊಂಡಿದ್ದು, 84 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ತಕ್ಷಣವೇ ರಕ್ಷಣಾ ತಂಡಗಳು ಧಾವಿಸಿದ್ದು, ಆಂಗಲ್ ಗ್ರೈಂಡರ್ಗಳು ಮತ್ತು ಭಾರಿ ಯಂತ್ರೋಪಕರಣಗಳನ್ನು ಬಳಸಿ ರೈಲಿನ ಉಕ್ಕನ್ನು ಕತ್ತರಿಸುವ ಮೂಲಕ ಅವಶೇಷಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ.
ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಸಯಾಫಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಜ್ಜುಗುಜ್ಜಾದ ರೈಲಿನಡಿ ಸಿಲುಕಿದ್ದವರನ್ನು ರಕ್ಷಿಸುವುದು ಅತ್ಯಂತ ಸೂಕ್ಷ್ಮ ಸವಾಲಾಗಿತ್ತು. ಪರಿಣತ ಸಿಬ್ಬಂದಿಯ ಮೂಲಕ ಅವಶೇಷಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.















