ಮುಂಬೈ : ತನ್ನ ಬ್ಲಂಡರ್ನಿಂದಲೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಸೋಲಾಯ್ತಾ ಎಂಬ ಪ್ರಶ್ನೆ ಎದ್ದಿದೆ. ನಿನ್ನೆಯ ಪಂದ್ಯದಲ್ಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 76 ರನ್ (30 ಎಸೆತ, 4 ಬೌಂಡರಿ, 8 ಸಿಕ್ಸ್) ಹೊಡೆದು ಔಟಾಗಿದ್ದರು. ಒಂದು ವೇಳೆ ಮುಂಬೈ ಇಂಡಿಯನ್ಸ್ ಹೆಡ್ 8 ರನ್ಗಳಿಸಿದ್ದಾಗ ರಿವ್ಯೂ ಪಡೆಯುತ್ತಿದ್ದರೆ ಔಟಾಗುತ್ತಿದ್ದರು ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹೈದರಾಬಾಬ್ ಇನ್ನಿಂಗ್ಸ್ನ ಮೂರನೇ ಓವರ್ನ ಟ್ರೆಂಟ್ ಬೌಲ್ಟ್ ಅವರ 2ನೇ ಎಸೆತದಲ್ಲಿ ಚೆಂಡು ಹೆಡ್ ಬ್ಯಾಟ್ ಬಳಿ ಸಾಗಿ ಕೀಪರ್ ರಿಯಾನ್ ರಿಕೆಲ್ಟನ್ ಕೈ ಸೇರಿತ್ತು. ಬಾಲ್ ಕೀಪರ್ ಕೈ ಸೇರಿದರೂ ಮುಂಬೈ ತಂಡದ ಔಟ್ಗೆ ಮನವಿಯಾಗಲಿ ರಿವ್ಯೂ ಪಡೆದಿರಲಿಲ್ಲ. ಆದರೆ ಆಲ್ಟ್ರಾ ಎಡ್ಜ್ನಲ್ಲಿ ಚೆಂಡು ಬ್ಯಾಟ್ ಸವರಿದ್ದು ಕಾಣಿಸಿತ್ತು.
ಇದಕ್ಕೂ ಮೊದಲು ಬೌಲ್ಟ್ ಅವರ ಪ್ರಥಮ ಎಸೆತದಲ್ಲೇ ಹೆಡ್ ಔಟಾಗಬೇಕಿತ್ತು. ಹೆಡ್ ಸಿಕ್ಸ್ ಸಿಡಿಸಲು ಬಲವಾಗಿ ಹೊಡೆದಿದ್ದರು. ಬಾಲ್ ಬ್ಯಾಕ್ವರ್ಡ್ ಪಾಯಿಂಟ್ ಕಡೆಗೆ ಹೋಗಿತ್ತು. ಇಲ್ಲಿದ್ದ ನಮನ್ ಧೀರ್ ಕ್ಯಾಚ್ ಹಿಡಿಯಲು ಮೇಲಕ್ಕೆ ಯತ್ನಿಸಿದರೂ ಬಾಲ್ ತಡೆಯಲು ಸಾಧ್ಯವಾಗಲಿಲ್ಲ. ಆರಂಭದಲ್ಲೇ 2 ಜೀವದಾನ ಪಡೆದ ಹೆಡ್ ನಂತರ ಮುಂಬೈ ಬೌಲರ್ಗಳನ್ನು ಚೆಂಡಾಡಿದರು. 20 ಎಸೆತಗಳಲ್ಲಿ ಅರ್ಧಶತಕ ಹೊಡೆದ ಹೆಡ್ ಕೊನೆಗೆ 76 ರನ್ ಗಳಿಸಿದ್ದಾಗ ಪಾಂಡ್ಯ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟಾದರು.
ಮುಂಬೈ ರಿಯಾನ್ ರಿಕೆಲ್ಟನ್ 123 ರನ್(55 ಎಸೆತ, 10 ಬೌಂಡರಿ, 8 ಸಿಕ್ಸ್) ಅವರ ಶತಕದ ಸಹಾಯದಿದ 5 ವಿಕೆಟ್ ನಷ್ಟಕ್ಕೆ 243 ರನ್ ಹೊಡೆದಿತ್ತು. ಕಠಿಣ ಮೊತ್ತವಾಗಿದ್ದರೂ ಹೈದರಾಬಾದ್ ಹೆಡ್ 76 ರನ್, ಅಭಿಷೇಕ್ ಶರ್ಮಾ 45 ರನ್(24 ಎಸೆತ, 4 ಬೌಂಡರಿ, 3 ಸಿಕ್ಸ್), ಕ್ಲಾಸೆನ್ 65 ರನ್(30 ಎಸೆತ, 7 ಬೌಂಡರಿ, 4 ಸಿಕ್ಸ್) ಸಲಿಲ್ ಅರೋರಾ 30 ರನ್(10 ಎಸೆತ, 2 ಬೌಂಡರಿ, 3 ಸಿಕ್ಸ್) ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 249 ರನ್ ಹೊಡೆದು 6 ವಿಕೆಟ್ಗಳ ಜಯ ಸಾಧಿಸಿತು.















