ಮನೆ ರಾಷ್ಟ್ರೀಯ ಬಿಜೆಪಿಗೆ ಗೆಲುವಿನ ಮುನ್ಸೂಚನೆ – ದೊಡ್ಡ ಚಿಂತೆಯ ವಿಷಯ ಎಂದ ಬಾಂಗ್ಲಾ ಸಂಸದ

ಬಿಜೆಪಿಗೆ ಗೆಲುವಿನ ಮುನ್ಸೂಚನೆ – ದೊಡ್ಡ ಚಿಂತೆಯ ವಿಷಯ ಎಂದ ಬಾಂಗ್ಲಾ ಸಂಸದ

0

ಢಾಕಾ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಬಹುಮತದ ಮುನ್ಸೂಚನೆ ನೀಡುತ್ತಿರುವುದು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಬೆಳವಣಿಗೆಯು ಬಾಂಗ್ಲಾದೇಶಕ್ಕೆ ದೊಡ್ಡ ಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಸವಾಲನ್ನು ತಂದೊಡ್ಡಲಿದೆ ಎಂದು ಬಾಂಗ್ಲಾದ ನೂತನ ಸಂಸದ ಅಖ್ತರ್ ಹೊಸ್ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು “ಬಾಂಗ್ಲಾದೇಶಕ್ಕೆ ಬಂದಿರುವ ಎಚ್ಚರಿಕೆಯ ಗಂಟೆ” ಎಂದು ಬಣ್ಣಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಮರಳಿ ಕಳುಹಿಸುವ ಪ್ರಕ್ರಿಯೆ ಆರಂಭವಾಗಬಹುದು. ಇದು ಬಾಂಗ್ಲಾದೇಶದ ಮೇಲೆ ಮತ್ತೊಂದು ಭೀಕರ ನಿರಾಶ್ರಿತರ ಹೊರೆ ಹೇರಲಿದೆ ಎಂದು ಹೊಸ್ಸೇನ್ ಎಚ್ಚರಿಸಿದ್ದಾರೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಗೊಳಿಸಿದರೆ ಮತ್ತು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ದೊಡ್ಡ ಸಂಖ್ಯೆಯಲ್ಲಿ ಜನರು ಗಡಿ ದಾಟಿ ಬಾಂಗ್ಲಾಕ್ಕೆ ನುಗ್ಗುವ ಸಾಧ್ಯತೆಯಿದೆ. ಈಗಾಗಲೇ ಲಕ್ಷಾಂತರ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿ ಹೈರಾಣಾಗಿರುವ ಬಾಂಗ್ಲಾದೇಶಕ್ಕೆ, ಈಗ ಭಾರತದಿಂದಲೂ ಜನರು ವಾಪಸ್ ಬಂದರೆ ಅದನ್ನು ನಿಭಾಯಿಸುವುದು ಅಸಾಧ್ಯದ ಮಾತು ಎಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ

ಭಾರತದ ಗಡಿ ರಾಜ್ಯವೊಂದರಲ್ಲಿ ನಡೆಯುವ ರಾಜಕೀಯ ಬದಲಾವಣೆಗಳು ಬಾಂಗ್ಲಾದೇಶದ ಆಂತರಿಕ ಭದ್ರತೆ ಮತ್ತು ಗಡಿ ನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರಲಿವೆ ಎಂದು ಅಖ್ತರ್ ಹೊಸ್ಸೇನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಭಾರತದಲ್ಲಿನ ಬಿಜೆಪಿ ನಾಯಕರು ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಗಳು ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಶ್ಚಿಮ ಬಂಗಾಳದ ಗಡಿ ಭಾಗಗಳಲ್ಲಿನ ಜನಸಂಖ್ಯಾ ಬದಲಾವಣೆಯ ಬಗ್ಗೆ ಬಿಜೆಪಿ ದಶಕಗಳಿಂದ ಧ್ವನಿ ಎತ್ತುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಫಲಿತಾಂಶವು ಒಂದು ವೇಳೆ ಸಮೀಕ್ಷೆಗಳಂತೆಯೇ ಬಂದರೆ, ಅದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರುವುದು ಖಚಿತ ಎಂದೇ ವಿಶ್ಲೇಷಿಸಲಾಗುತ್ತದೆ.

ಯಾರಿದು ಅಖ್ತರ್‌ ಹೊಸ್ಸೇನ್‌? – ಅಖ್ತರ್ ಹೊಸ್ಸೇನ್ ಅವರು ಬಾಂಗ್ಲಾದೇಶದ ಒಬ್ಬ ಯುವ ರಾಜಕಾರಣಿಯಾಗಿದ್ದು 2024ರ ಬಾಂಗ್ಲಾದೇಶದ ಕೋಟಾ ಸುಧಾರಣಾ ಚಳವಳಿ ಮತ್ತು ಜನಪ್ರಿಯ ದಂಗೆಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎನ್‌ಸಿಪಿ ಪಕ್ಷದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ರಂಗ್‌ಪುರ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿದ 2024ರ ಬೃಹತ್ ವಿದ್ಯಾರ್ಥಿ ದಂಗೆಯಲ್ಲಿ ಎನ್‌ಸಿಪಿ ಮತ್ತು ಅದರ ನಾಯಕರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿ ನೇತೃತ್ವದ 11 ಪಕ್ಷಗಳ ಒಕ್ಕೂಟ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಈ ಒಕ್ಕೂಟದಲ್ಲಿ ಎನ್‌ಸಿಪಿ ಸ್ಥಾನ ಪಡೆದಿದೆ.