ಬೆಂಗಳೂರು ಶುಕ್ರವಾರ (ಮೇ.1)ರಂದು ಸಿಲಿಕಾನ್ ಸಿಟಿಯ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಘಾಲಯ ಮೂಲದ ಯುವತಿ ಒಬ್ಬರು ನೇಣು ಹಾಕಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದ ಮತ್ತು KSU ಘಟಕದ ಸದಸ್ಯೆಯಾಗಿದ್ದ ಮೃತ ಯುವತಿಯು ಅಗತ ಬೈತಿಯಂಗುಂ (36) ಎಂದು ಗುರುತಿಸಲಾಗಿದೆ. ಯುವತಿಯು ಕಳೆದ ಮೂರು ವರ್ಷಗಳಿಂದ ಮಣಿಪುರ ಮೂಲದ ನವಾಜ್ ಶರೀಫ್ (20) ಎಂಬ ಯುವಕನ ಜೊತೆ ಸಂಜೀವಿನಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಇಬ್ಬರು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರ ನಡುವೆ ವಯಸ್ಸಿನ ಅಂತರ 16 ವರ್ಷ ಹೆಚ್ಚಿದ್ದರಿಂದ ಇಬ್ಬರ ನಡುವೆ ಪದೇ ಪದೇ ಜಗಳ ಮನಸ್ತಾಪಗಳು ಬರುತ್ತಿದ್ದವು ಎಂದು ತಿಳಿದುಬಂದಿದೆ.
ನವಾಜ್ ಶರೀಫ್ ಬೇರೆ ಯುವತಿಯರ ಜೊತೆ ಮಾತನಾಡುತ್ತಾನೆ ಎಂಬ ಸಂಶಯ ಅಗತ ಅವರಿಗಿತ್ತು. ಕಳೆದ ಬುಧವಾರ(ಏ 29) ರಂದು ರಾತ್ರಿ ನವಾಜ್ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಗತ ಅವರು ಯಾರೋ ಹುಡುಗಿಯ ಜೊತೆ ಮಾತನಾಡುತ್ತಿದ್ದೀಯ ಎಂದು ಜಗಳ ಮಾಡಿದ್ದರು ಎನ್ನಲಾಗಿದೆ. ಈ ಗಲಾಟೆಯಿಂದ ಬೇಸತ್ತ ನವಾಜ್ ಮನೆಯಿಂದ ಆಚೆ ಹೋಗಿದ್ದು. ಈ ಸಮಯದಲ್ಲಿ ಮನನೊಂದ ಯುವತಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬುಧವಾರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.













