ಮನೆ ಸುದ್ದಿ ಜಾಲ ಹೈಕೋರ್ಟ್ ಆದೇಶ : 10th ಪಾಸ್ ಆದವರಿಗೂ ಪ್ಯಾರಾಮೆಡಿಕಲ್‌ ಕೋರ್ಸ್‌ ಸೇರಲು ಅವಕಾಶ

ಹೈಕೋರ್ಟ್ ಆದೇಶ : 10th ಪಾಸ್ ಆದವರಿಗೂ ಪ್ಯಾರಾಮೆಡಿಕಲ್‌ ಕೋರ್ಸ್‌ ಸೇರಲು ಅವಕಾಶ

0

ಬೆಂಗಳೂರು 2026–27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್​​ಸಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಅರೆ ವೈದ್ಯಕೀಯ ಸಂಸ್ಥೆಗಳಲ್ಲಿ ಕೆಲವು ಡಿಪ್ಲೊಮಾ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ಹೈಕೋರ್ಟ್‌ ಅವಕಾಶ ನೀಡಿ  ಮಧ್ಯಂತರ ಆದೇಶ ನೀಡಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು 640 ಕಾಲೇಜುಗಳನ್ನು ಹೊಂದಿರುವ ಕರ್ನಾಟಕ ಅರೆ ವೈದ್ಯಕೀಯ ಸಂಸ್ಥೆಗಳ ನಿರ್ವಹಣಾ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿತು ಎನ್ನಲಾಗಿದೆ.

ಈ ಕುರಿತಾಗಿ 2026-27ರ ಸಾಲಿನ  ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸ್‌ ಆದ  ವಿದ್ಯಾರ್ಥಿಗಳನ್ನು ಪ್ಯಾರಾಮೆಡಿಕಲ್‌ನ ಕೋರ್ಸ್‌ಗಳಾದ ಪ್ರಯೋಗಾಲಯ ತಂತ್ರಜ್ಞಾನ, ಅಪ್ಟೋಮೆಟ್ರಿ ತಂತ್ರಜ್ಞಾನ, ಡಿಪ್ಲೊಮಾ ಇನ್‌ ಹೆಲ್ತ್‌ ಇನ್‌ಸ್ಪೆಕ್ಟರ್ ಮತ್ತು ಇಮೇಜಿಂಗ್‌ ತಂತ್ರಜ್ಞಾನ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಸೇರಿಸಿಕೊಳ್ಳಬಹುದು ಎಂದು ಕೋರ್ಟ್ ಆದೇಶ ನೀಡಿದೆ ಎಂಬ ಮಾಹಿತಿ ಬಂದಿದೆ. ಅದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಷನಲ್‌ ಹೆಲ್ತ್ ಪ್ರೊಫೆಷನ್ ಅಲೈಡ್ ಆಕ್ಟ್‌-2021ರ ಕಾಯಿದೆ ಜಾರಿ ಮಾಡಿದ್ದು, ಪ್ಯಾರಾಮೆಡಿಕಲ್‌ ಕೋರ್ಸ್‌ಗೆ ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿರಬೇಕು ಎಂದು ತಿಳಿಸಿತ್ತು ಎನ್ನಲಾಗಿದೆ.

ಹೀಗಾಗಿ 2021ರಲ್ಲಿ ಕಾಯಿದೆ ಜಾರಿ ಮಾಡಿದ್ದು ಅದನ್ನು ಹಂತ ಹಂತವಾಗಿ ಅನುಷ್ಟಾನ ಮಾಡಲಾಗುತ್ತಿತ್ತು. ಆದರೆ ಈವರೆಗೂ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಪ್ಯಾರಾಮೆಡಿಕಲ್​ಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ. ಆದ್ದರಿಂದ ಈ ಹಿಂದೆ ಇದ್ದ ನಿಯಮಗಳಂತೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು ಎಂದು ಕೋರಿದ್ದರು. ವಾದ ಆಲಿಸಿದ ಪೀಠ  ಹೈಕೋರ್ಟ್‌ ಈ ಆದೇಶ ಕೊಟ್ಟಿದೆ ಎಂದು ತಿಳಿಸಿದೆ.