ಮೈಸೂರು : ರಸ್ತೆ ವಿಸ್ತರಣೆ ನೆಪದಲ್ಲಿ ಹೈದರಾಲಿ ರಸ್ತೆಯ 40 ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದ ಬೆನ್ನಲ್ಲೇ ಇದೀಗ ಮೂರು ಪ್ರಮುಖ ರಸ್ತೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಬರೋಬ್ಬರಿ 561 ಮರಗಳನ್ನು ಕಡಿಯಲು ಗುರುತು ಹಾಕಿದ್ದು, ಸಾರ್ವಜನಿಕ ವಲಯದಲ್ಲಿಆತಂಕ ಮೂಡಿಸಿದೆ. ಇದರಲ್ಲಿ 3 ಶ್ರೀಗಂಧದ ಮರಗಳೂ ಇವೆ. ಅದೇ ರೀತಿ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಟಿವಿಎಸ್ ಸರ್ಕಲ್ ಕಡಕೋಳ ಮತ್ತು ಮಂಡಕಳ್ಳಿ ರಸ್ತೆ ಕಾಮಗಾರಿಗಾಗಿ 15 ಮರಗಳನ್ನು ಕಡಿಯಲು ಗುರುತಿಸಲಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಈಗಾಗಲೇ ಹವಾಮಾನ ಬದಲಾವಣೆಯಿಂದ ವಾತಾವರಣದಲ್ಲಿ ಬಿಸಿಲಿನ ಕಾವು ಹೆಚ್ಚುತ್ತಿದೆ. ಕೆಂಡದಂತಹ ಬಿಸಿಲಿನ ಅನುಭವದಿಂದ ಸಾರ್ವಜನಿಕರು ಬಸವಳಿದಿದ್ದಾರೆ. ಆದರೂ ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಕಾರಣಗಳಿಗಾಗಿ ಮರಗಳನ್ನು ಕಡಿಯುವ ಪ್ರಕ್ರಿಯೆ ಮಾತ್ರ ನಿಂತಿಲ್ಲ. ಇದೀಗ ಮೈಸೂರಿನಲ್ಲಿ ಮೂರು ಪ್ರಮುಖ ರಸ್ತೆ ಕಾಮಗಾರಿಗಾಗಿ 561 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗುರುತು ಹಾಕಿದೆ. ಇದು ಸಹಜವಾಗಿಯೇ ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ನಗರದ ಸಿದ್ಧಿಕಿ ನಗರ ಬಳಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನ ಹತ್ತಿರ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಫ್ಲೈಓವರ್ ನಿರ್ಮಾಣ ಮಾಡಲು ಒಟ್ಟು 350 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗುರುತು ಹಾಕಿದೆ. ಸಿದ್ಧಿಕಿ ನಗರದಿಂದ ಮೈಸೂರಿನ ಫೌಂಟೇನ್ ಸರ್ಕಲ್ ರಸ್ತೆವರೆಗೆ 19 ಮರ, ಬನ್ನಿಮಂಟಪ ರಸ್ತೆ ಪಾರ್ಕ್ ಆವರಣದಲ್ಲಿರುವ 256 ಮರ, ಹುಣಸೂರು ರಸ್ತೆ ಮಧ್ಯಭಾಗದ 52 ಮರ ಹಾಗೂ ನಂಜನಗೂಡು ರಸ್ತೆಯ ಮಧ್ಯ ಭಾಗದ 20 ಮರಗಳನ್ನು ಗುರುತಿಸಲಾಗಿದೆ.
ಟಿವಿಎಸ್ ಸರ್ಕಲ್ (ಕಡಕೊಳ) ಸಮೀಪ 10 ಹಾಗೂ ಮಂಡಕಳ್ಳಿ ಬಳಿ 4 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಇನ್ನು ಕೇರಳದ ಗಡಿಯಿಂದ ಕೊಳ್ಳೆಗಾಲದ ರಸ್ತೆ ಕಾಮಗಾರಿ ನಡೆಸಲು 196 ಮರಗಳನ್ನು ಕಡಿಯಲು ಗುರುತು ಮಾಡಲಾಗಿದೆ. ವರುಣ ಸರ್ಕಲ್‌ನಲ್ಲಿ26 ಮರ, ದುದ್ದಗೆರೆ- ಪುಟ್ಟೇಗೌಡನ ಹುಂಡಿ ಸಮೀಪ 110 ಮರ ಹಾಗೂ ಎಂಸಿ ಹುಂಡಿ ಬಳಿ 60 ಮರಗಳನ್ನು ಗುರುತಿಸಲಾಗಿದೆ.
ಫ್ಲೈಓವರ್ ಮಾಡಲು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಬಲ ಭಾಗದ ರಸ್ತೆಯ (ಮೈಸೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ) ಎರಡು ಬದಿಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಾಕ್೯ಗಳಿವೆ. ಇದೀಗ ಕಾಮಗಾರಿಯಿಂದ ಎರಡು ಪಾರ್ಕ್ನ ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ. ಹೊಂಗೆ, ಬೇವು, ಕಾಡ ಬೇವು, ಶ್ರೀಗಂಧದ ಮರಗಳೂ ಇಲ್ಲಿವೆ. ಒಂದು ಕಾಲದಲ್ಲಿ ಈ ಪಾರ್ಕ್ನಲ್ಲಿ ವಾಯುವಿಹಾರಿಗಳು ಬರುತ್ತಿದ್ದರು.

















