ಮೈಸೂರು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಾಲಿನ ಇಳುವರಿ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲೂ ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದ್ದು, ಕ್ಷೀರ ಕ್ರಾಂತಿ ಆಗಿದೆ ಎನ್ನಲಾಗಿದೆ. ಹೈನುಗಾರಿಕೆಯನ್ನು ನಂಬಿರುವ ಸಾವಿರಾರು ರೈತರಿಗೆ, ಹಸುಗಳನ್ನು ಸಾಕುವವರಿಗೆ ದೊರೆಯುತ್ತಿರುವ ಉತ್ತಮ ಸೌಲಭ್ಯಗಳ ಪರಿಣಾಮ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದೆ ಎನ್ನುತ್ತಾರೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು. ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಕೆಲವೊಂದು ದಿನ 10 ಲಕ್ಷ ಲೀಟರ್ಗೂ ಹೆಚ್ಚು ಹಾಲು ಸಂಗ್ರಹವಾಗಿರುವುದು ಗಮನಾರ್ಹ. ಇದೇ ಪರಿಸ್ಥಿತಿ ಚಳಿಗಾಲದಲ್ಲೂ ಮುಂದುವರಿದರೆ 12 ರಿಂದ 13 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ತಲುಪಬಹುದು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಜಿಲ್ಲೆಯಲ್ಲಿ ಹಲವು ರೈತರು ಹಸುಗಳನ್ನು ಸಾಕಣೆ ಮಾಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪೂರಕವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿರುವ ಪರಿಣಾಮವಾಗಿ ಸಾಕಷ್ಟು ರೈತರು ಹೈನುಗಾರಿಕೆಯತ್ತ ಒಲವು ತೋರಿಸಲು ಪ್ರಾರಂಭಿಸಿರುವುದು ಗಮನಾರ್ಹವಾಗಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 6.90 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ನಿತ್ಯ ಸರಾಸರಿ 9.27 ಲಕ್ಷ ಲೀಟರ್ ದಾಖಲೆಯ ಪ್ರಮಾಣದ ಹಾಲು ಉತ್ಪಾದನೆಯಾಗಿದೆ. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ ಹೆಚ್ಚುವರಿ ಹಾಲು ಉತ್ಪಾದನೆಯಾಗಿದೆ. 2026-27ನೇ ಸಾಲಿನಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗುತ್ತೆ.
ಹೀಗಾಗಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಜಾನುವಾರುಗಳ ರೋಗಗಳನ್ನು ತಡೆಗಟ್ಟಲು ಇಲಾಖಾ ಅಧಿಕಾರಿ, ಸಿಬ್ಬಂದಿಗಳು ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುತ್ತಿದ್ದು, ಇದರ ಪರಿಣಾಮ ಜಾನುವಾರುಗಳಿಗೆ ಕಾಯಿಲೆಯ ಪ್ರಮಾಣ ಇಳಿಮುಖವಾಗಿ ಉತ್ತಮ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಜಂತುನಾಶಕ ತಡೆಯಲು ಖನಿಜ ಮಿಶ್ರಣಗಳನ್ನು ನಿಯಮಿತವಾಗಿ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಉಚಿತವಾಗಿ ಮೇವಿನ ಕಿರುಪೊಟ್ಟಣಗಳ ವಿತರಣೆ ಮಾಡಲಾಗುತ್ತಿದೆ. ಶೇ.50ರಷ್ಟು ಸಬ್ಸಿಡಿ ದರದಲ್ಲಿ ಮೇವು ಕತ್ತರಿಸು ಯಂತ್ರ ಹಾಗೂ ರಬ್ಬರ್ ನೆಲಹಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರ ಮನೆ ಬಾಗಿಲಿಗೆ ಪಶುವೈದ್ಯಕೀಯ ಸೇವೆ ಒದಗಿಸಲು 10 ಸಂಚಾರ ಪಶುಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉತ್ತಮ ಕೃತಕಗರ್ಭಧಾರಣೆ ಮುಖಾಂತರ ಹೆಚ್ಚು ಇಳುವರಿ ನೀಡುವ ಉತ್ತಮ ರಾಸುಗಳ ಕರುಗಳ ಜನನವಾಗುತ್ತಿದೆ. ಮತ್ತಷ್ಟು ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲೆಗೆ 31 ನೂತನ ಪಶುವೈದ್ಯಕೀಯ ಇಲಾಖೆಯ ಕಟ್ಟಡ, 9 ಪ್ರಯೋಗಾಲಯಗಳು, 3 ಪಾಲಿಕ್ಲಿನಿಕ್, 1 ತರಬೇತಿ ಕೇಂದ್ರ, ಹೆಚ್ಚುವರಿಯಾಗಿ 17 ಪಶುವೈದ್ಯ ಸಂಸ್ಥೆಗಳು ಮಂಜೂರಾಗಿವೆ.
ಈ ಕುರಿತು ಹೊಸದಾಗಿ ಗುತ್ತಿಗೆ ಆಧಾರದಲ್ಲಿ 12 ಪಶುವೈದ್ಯರು ಮತ್ತು 175-ಡಿ ದರ್ಜೆ ನೌಕರರ ನೇಮಕಾತಿ ಮಾಡಿ ಅವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೇವಿಗಿಲ್ಲ ಕೊರತೆ: ಬೇಸಿಗೆಯಲ್ಲಿ ಮೇವಿನ ಕೊರತೆ ಕಂಡು ಬಂದರೆ ಹಾಲಿನ ಉತ್ಪಾದನೆಯ ಪ್ರಮಾಣ ತೀವ್ರವಾಗಿ ಇಳಿಮುಖವಾಗುತ್ತದೆ. ಈ ರೀತಿ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಅಗತ್ಯ ಕ್ರಮ ವಹಿಸಿದೆ ಎನ್ನಬಹುದು . ಈ ಬಾರಿ ಬೇಸಿಗೆಗೆ ಅಗತ್ಯವಾದಷ್ಟು ಮೇವು ದಾಸ್ತಾನು ಇದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ, ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದರ ಜತೆಗೆ ರೈತರಿಗೆ ಈ ಹಿಂದೆ ನೀಡಿದ್ದ ಮೇವಿನ ಸಸಿಗಳನ್ನು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿದ್ದು, ಈ ಸಸಿಗಳು ಮರಗಳಾಗಿ ಬೆಳೆದು ನಿಂತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಮೇವು ಸಹ ಜಾನುವಾರುಗಳಿಗೆ ದೊರೆಯುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈತರಿಗೆ ಇಲಾಖೆಯಿಂದ ಮೇವಿನ 1,500 ಮಿನಿ ಕಿಟ್ಗಳನ್ನು ವಿತರಣೆ ಮಾಡಲಾಗಿದೆ.
ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ತೊಟ್ಟಿಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ನಡೆಯುತ್ತಿದೆ. ಉಪ ನಿರ್ದೇಶಕರ ಪ್ರತಿಕ್ರಿಯೆ: ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಲವು ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ರೈತರು ಜಾನುವಾರುಗಳ ಸಾಕಾಣೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕಳೆದ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರತಿನಿತ್ಯ ಸರಾಸರಿ 9.27 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಸಿ ನಾಗರಾಜು ತಿಳಿಸಿದ್ದಾರೆ ಎನ್ನಲಾಗಿದೆ.

















