ಹೊಸಪೇಟೆ ಬುಧವಾರ (ಮೇ 6) ಕಲ್ಯಾಣ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಇದೀಗ ‘ಡೆಡ್ ಸ್ಟೋರೇಜ್’ ಹಂತಕ್ಕೆ ತಲುಪಿದೆ. ಜಲಾಶಯದಲ್ಲಿ ಪ್ರಸ್ತುತ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಮುಂಬರುವ ಮಳೆಗಾಲದವರೆಗೆ ಈ ನೀರನ್ನು ನಾಲ್ಕು ಜಿಲ್ಲೆಗಳಿಗೆ ಹಂಚಿಕೆ ಮಾಡುವುದು ತುಂಗಭದ್ರಾ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನಬಹುದಾಗಿದೆ.
ಜಲಾಶಯದಲ್ಲಿ ನೀರಿನ ಮಟ್ಟ ಅಧೀಕವಾಗಿ ಕಡೆಮೆಯಾಗಿರುವ ಹಿನ್ನೆಲೆಯಲ್ಲಿ, ಇರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡಬೇಕಿದೆ. ಈಗಾಗಲೇ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತಿದ್ದು, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಭಾಗದ ಕೆರೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಮೇ ತಿಂಗಳ ಬಿಸಿಲಿನ ತಾಪಕ್ಕೆ ನೀರಿನ ಆವಿಯಾಗುವಿಕೆ ಹೆಚ್ಚಾಗುವುದರಿಂದ, ಜೂನ್‌ನಲ್ಲಿ ಮಳೆ ಬರುವವರೆಗೂ ಕುಡಿಯುವ ನೀರಿಗೆ ತತ್ವಾರ ಉಂಟಾಗದಂತೆ ನಿಭಾಯಿಸುವುದು ಅಧಿಕಾರಿಗಳಿಗೆ ಕಷ್ಟಸಾಧ್ಯತೆ ಎನಿಸುತ್ತಿದೆ ಎಂದಿದ್ದಾರೆ ಎನ್ನಲಾಗುತ್ತಿದೆ.
ಆದರೆ ಮತ್ತೊಂದು ಕಡೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಲಾಗಿದ್ದ 33 ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಇದೀಗ ಮುಕ್ತಾಯವಾಗಿದೆ. ಸುಮಾರು 54 ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳನ್ನು ಬದಲಾಯಿಸಲಾಗಿದ್ದು, ಮುಂದಿನ 50 ವರ್ಷಗಳ ಕಾಲ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಲಿವೆ ಎಂದು ತಜ್ಞರು ತಿಳಿಸಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಲಾಶಯಕ್ಕೆ ಭೇಟಿ ನೀಡಿ ರಿಪೇರಿ ಕಾರ್ಯವನ್ನು ಪರಿಶೀಲಿಸಿದ್ದಾರೆ. ಮೇ 15 ರಂದು ವಿಶೇಷ ಪೂಜೆಯ ಮೂಲಕ ದುರಸ್ತಿಗೊಂಡ ಗೇಟ್‌ಗಳ ಉದ್ಘಾಟನೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜಲಾಶಯದ ಗೇಟ್‌ಗಳು ದುರಸ್ತಿಯಾಗಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಜೂನ್ ತಿಂಗಳ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದ್ದು, ಆ ಬಳಿಕವಷ್ಟೇ ಅದ್ದೂರಿಯಾಗಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ. ಅಲ್ಲಿಯವರೆಗೂ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನೇ ಮಿತವಾಗಿ ಬಳಸಿ ಬೇಸಿಗೆಯನ್ನು ಕಳೆಯಬೇಕಾದ ಅನಿವಾರ್ಯತೆ ನಾಲ್ಕು ಜಿಲ್ಲೆಗಳ ಜನರಿಗಿದೆ ಎಂಬುದಾಗಿ ತಿಳಿಸಲಾಗಿದೆ.

















