ಗಂಜಾಮ್(ಒಡಿಶಾ): ನ್ಯಾಯಕ್ಕಾಗಿ ತನ್ನ ಅತ್ತೆ ಮನೆ ಮುಂದೆ ಧರಣಿ ಕುಳಿತಿದ್ದ ಗರ್ಭಿಣಿಯನ್ನು ಅಪ್ರಾಪ್ತ ಭಾಮೈದ ಕೊಲೆ ಮಾಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗಂಜಾಂ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸ್ಟಿನುವಾಗಮ್ ಪ್ರದೇಶದ 21 ವರ್ಷದ ಪೂಜಾ ಸ್ಟೈನ್ ಎಂದು ಗುರುತಿಸಲಾಗಿದೆ ಎನ್ನಬಹುದು.
ಹಿಂಜಿಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಭಾಮೈದನನ್ನು ವಶಕ್ಕೆ ಪಡೆದಿದ್ದು, ಮಂಗಳವಾರ ಸಂಜೆ ಫೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಸಾಯುವ ಮೊದಲು ಪೂಜಾ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಪ್ರಕಾರ, ಪೂಜಾ ಎರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾದ ಖಾರಿಡಾ ಗ್ರಾಮದ ಚಿಂಟು ಗೌಡ ಎಂಬವರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ ಎನ್ನಲಾಗಿದೆ.
ನಂತರ, ಇಬ್ಬರೂ ಪುರಿ ಜಿಲ್ಲೆಯ ಡೆಲಾಂಗ್‌ನಲ್ಲಿರುವ ಶಿವ ದೇವಾಲಯದಲ್ಲಿ ವಿವಾಹವಾಗಿದ್ದರು. ಕಳೆದ ಕೆಲವು ತಿಂಗಳುಗಳಿಂದ, ಇಬ್ಬರೂ ಪುರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬಳು ಪುಟ್ಟ ಮಗಳಿದ್ದಾಳೆ. ಜೊತೆಗೆ, ನಾಲ್ಕು ತಿಂಗಳ ಗರ್ಭಿಣಿಯೂ ಆಗಿದ್ದರು. ಇಬ್ಬರೂ ಪುರಿಯಲ್ಲಿ ವಾಸಿಸುತ್ತಿದ್ದಾಗ, ಚಿಂಟು 15 ದಿನಗಳ ಹಿಂದೆ ತನ್ನ ಕುಟುಂಬಕ್ಕೆ ಹಿಂತಿರುಗುವಂತೆ ಹೇಳಿ ಅವಳನ್ನು ತೊರೆದು ಬಂದಿದ್ದ. ಹಾಗಾಗಿ, ಪೂಜಾ ನ್ಯಾಯಕ್ಕಾಗಿ ಹಿಂಜಿಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಹಿಂಜಿಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿಂಟು ಅವರ ತಂದೆ, ತಾಯಿ ಮತ್ತು ಸಹೋದರಿಯನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಲಾಗಿತ್ತು.
ಹಾಗೂ ಇದರ ನಡುವೆ ಮಹಿಳೆ ಸೋಮವಾರ, ನ್ಯಾಯಕ್ಕಾಗಿ ಒತ್ತಾಯಿಸಿ ಖಾರಿಡಾ ಗ್ರಾಮದಲ್ಲಿರುವ ತನ್ನ ಗಂಡನ ಮನೆಗೆ ಹೋಗಿ ಧರಣಿ ಕುಳಿತಿದ್ದರು. ಮಂಗಳವಾರ (ಮೇ 5),ರಂದು ಚಿಂಟು ಅವರ ಅಪ್ರಾಪ್ತ ಸಹೋದರ ಲಿಟು ಪೂಜಾಳನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೂಜಾಳ ಮೃತದೇಹದ ಪಕ್ಕದಲ್ಲಿ ಮಗಳು ಕುಳಿತು ಅಳುತ್ತಿದ್ದ ದೃಶ್ಯ ಮನಕರಗುವಂತಿತ್ತು. ಸುದ್ದಿ ತಿಳಿದ ತಕ್ಷಣ ಹಿಂಜಿಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ಬೆರ್ಹಾಂಪುರ್ ಎಂಕೆಸಿಜಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ ಎನ್ನಲಾಗಿದ್ದು ಅಸಿಕಾ ಉಪ-ಜಿಲ್ಲಾ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಜೆನಾ ಮತ್ತು ಹಿಂಜಿಲಿ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ಸೇಥಿ ಅವರ ಮೇಲ್ವಿಚಾರಣೆಯಲ್ಲಿ ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಮಾಹಿತಿ ತಿಳಿದುಬಂದಿದೆ.
ಈ ಪ್ರಕರಣ ಕುರಿತು ಈ ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಸಾವಿಗೂ ಮುನ್ನ, ಸ್ಥಳೀಯ ಮಾಧ್ಯಮಗಳ ಮುಂದೆ ತನ್ನ ದುಃಖ ವ್ಯಕ್ತಪಡಿಸಿದ್ದಳು. ಕೆಲವು ಗಂಟೆಗಳ ನಂತರ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕಂಡುಬಂದಿದೆ ಎನ್ನಬಹುದು.

















