ಮನೆ ಸುದ್ದಿ ಜಾಲ ಇಬ್ಬರು ಅಂತರರಾಜ್ಯ ಬೈಕ್ ಕಳ್ಳರ ಬಂಧನ – 50 ವಾಹನಗಳು ಪೊಲೀಸರ ವಶಕ್ಕೆ

ಇಬ್ಬರು ಅಂತರರಾಜ್ಯ ಬೈಕ್ ಕಳ್ಳರ ಬಂಧನ – 50 ವಾಹನಗಳು ಪೊಲೀಸರ ವಶಕ್ಕೆ

0

ಹೊಸಕೋಟೆ : ಅಂತರರಾಜ್ಯ ಮಟ್ಟದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ, ಅವರಿಂದ ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಇವರು ಆಂಧ್ರಪ್ರದೇಶ ಮೂಲದ ಪ್ರಸಾದ್ ಹಾಗೂ ಕೋಲಾರದ ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಇವರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ, ಅವುಗಳನ್ನು ಗ್ರಾಮೀಣ ಭಾಗದ ಮುಗ್ಧ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹೀಗೆ ಬಂದ ಹಣದಲ್ಲಿ ಆರೋಪಿಗಳು ಮೋಜುಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಹೊಸಕೋಟೆ ಭಾಗದಲ್ಲಿ ಸರಣಿ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಚಂದ್ರಕಾಂತ್, ಡಿವೈಎಸ್ಪಿ ಮಲ್ಲೇಶ್ ಹಾಗೂ ಇನ್ಸ್‌ಪೆಕ್ಟರ್ ಗೋವಿಂದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಆದರೆ ಈ ತಂಡದಲ್ಲಿದ್ದ ಕ್ರೈಂ ಕಾನ್ಸ್ಟೇಬಲ್ ಗೋಪಾಲ್ ಅವರು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿ ಈ ಬೃಹತ್ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಈಗಾಗಲೇ ವಿವಿಧ 8 ಪೊಲೀಸ್ ಠಾಣೆಗಳಲ್ಲಿ 45ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ. ಸದ್ಯ ಈ ಇಬ್ಬರೂ ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಬೃಹತ್ ಸಂಖ್ಯೆಯ ಬೈಕ್‌ಗಳನ್ನು ವಶಪಡಿಸಿಕೊಂಡ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ಘೋಷಿಸಲಾಗಿದೆ ಎನ್ನಬಹುದು.