ಐಪಿಎಲ್ 2026 ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಹತ್ವದ ಚರ್ಚೆಯೊಂದು ಆರಂಭವಾಗಿದೆ. ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಸಂಪೂರ್ಣ ಫಿಟ್ ಆಗಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ಇದು ಆರ್ಸಿಬಿ ತಂಡಕ್ಕೆ ದೊಡ್ಡ ಲಾಭವಾಗಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಎರಡು ವಿಕೆಟ್ ಗೆಲುವಿನ ನಂತರ ಆರ್ಸಿಬಿ ತಂಡ ಉತ್ತಮ ಮೊಮೆಂಟಮ್ ಪಡೆದುಕೊಂಡಿದೆ. ಈ ಗೆಲುವಿನಿಂದ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದ್ದು, ಪ್ಲೇಆಫ್ ಹಂತದತ್ತ ಮುನ್ನಡೆಯಲು ನಿರಂತರ ಜಯಗಳಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಇನ್ನೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದರೂ ನಂತರದ ಪಂದ್ಯಗಳಲ್ಲಿ ಲಯ ಕಂಡುಕೊಂಡಿದೆ. ಆರು ಪಂದ್ಯಗಳಲ್ಲಿ ಐದು ಸೋಲು ಮತ್ತು ಒಂದು ಫಲಿತಾಂಶವಿಲ್ಲದ ಪಂದ್ಯ ನಂತರ ಕೆಕೆಆರ್ ತಂಡ ನಾಲ್ಕು ಪ್ರಮುಖ ಪಂದ್ಯಗಳನ್ನು ಗೆದ್ದು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಈ ಸಂದರ್ಭದಲ್ಲಿ ವರುಣ್ ಚಕ್ರವರ್ತಿ ಅವರ ಪಾತ್ರ ಕೆಕೆಆರ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಆರಂಭಿಕ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲವಾಗಿದ್ದ ವರುಣ್ ನಂತರದ ಐದು ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಮಧ್ಯಮ ಓವರ್ ಗಳಲ್ಲಿ ಎದುರಾಳಿ ಬ್ಯಾಟರ್ ಗಳ ಮೇಲೆ ಒತ್ತಡ ಹೇರುವಲ್ಲಿ ಅವರು ಯಶಸ್ವಿಯಾಗಿದ್ದರು. ಅವರ ಸ್ಪಿನ್ ದಾಳಿ ಎದುರಿಸಲು ಅನೇಕ ತಂಡಗಳು ಸಂಕಷ್ಟ ಅನುಭವಿಸಿದ್ದವು.
ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡಿದ್ದರು. ಒಟ್ಟು 14 ವಿಕೆಟ್ ಪಡೆದು ಟೂರ್ನಿಯ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಸೂಪರ್ 8 ಹಂತದಿಂದ ಫೈನಲ್ ವರೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಕೆಲವು ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಕಾರಣ ಟೀಕೆಗೂ ಗುರಿಯಾಗಿದ್ದರು.
ಇದೀಗ ವರುಣ್ ಚಕ್ರವರ್ತಿ ಅವರ ಗಾಯದ ಸಮಸ್ಯೆ ಕೆಕೆಆರ್ ತಂಡದ ಚಿಂತೆಗೆ ಕಾರಣವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರಿಗೆ ಗಾಯವಾಗಿತ್ತು ಎನ್ನಲಾಗಿದೆ. ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಅವರು ಕುಂಟುತ್ತಾ ಕಾಣಿಸಿಕೊಂಡಿದ್ದರು. ಇದರಿಂದ ಮುಂದಿನ ಪಂದ್ಯಕ್ಕೆ ಅವರ ಲಭ್ಯತೆ ಅನುಮಾನವಾಗಿದೆ.
ESPNCricinfo ವರದಿ ಪ್ರಕಾರ ಕೆಕೆಆರ್ ಸಹಾಯಕ ಕೋಚ್ ಶೇನ್ ವ್ಯಾಟ್ಸನ್, ವರುಣ್ ಚಕ್ರವರ್ತಿ ಇನ್ನೂ ನೋವಿನಲ್ಲಿದ್ದು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದರಿಂದಾಗಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಆಡಲಾರರೇ ಎಂಬ ಕುತೂಹಲ ಹೆಚ್ಚಾಗಿದೆ.
ಪಂದ್ಯಕ್ಕೂ ಮುನ್ನ ಜಿಯೋಸ್ಟಾರ್ ನ ಮ್ಯಾಚ್ ಸೆಂಟರ್ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ವರುಣ್ ಚಕ್ರವರ್ತಿ ಆಡದಿದ್ದರೆ ಅದು ಆರ್ಸಿಬಿಗೆ ದೊಡ್ಡ ಪ್ಲಸ್ ಆಗಲಿದೆ ಎಂದು ಹೇಳಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ವರುಣ್ ಉತ್ತಮ ಫಾರ್ಮ್ ಕಂಡುಕೊಂಡಿದ್ದರು. ಸರಿಯಾದ ಲೈನ್ ಮತ್ತು ಲೆಂಗ್ತ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ವಿಶೇಷವಾಗಿ ಮಧ್ಯಮ ಓವರ್ ಗಳಲ್ಲಿ ಬ್ಯಾಟರ್ ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೈಫ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿರಾಟ್ ಕೊಹ್ಲಿ ವೇಗದ ಸ್ಪಿನ್ ಬೌಲರ್ ಗಳ ವಿರುದ್ಧ ಆಡುವುದನ್ನು ಇಷ್ಟಪಡುವ ಆಟಗಾರ ಎಂದು ಕೈಫ್ ವಿಶ್ಲೇಷಿಸಿದರು. ವರುಣ್ ಅನುಪಸ್ಥಿತಿ ಇದ್ದರೆ ಆರ್ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಅಭಿಪ್ರಾಯಪಟ್ಟರು.
ಕೆಕೆಆರ್ ತಂಡವು ಸಾಮಾನ್ಯವಾಗಿ ಇಬ್ಬರು ವೇಗಿಗಳು, ಒಬ್ಬ ಆಲ್ ರೌಂಡರ್ ಮತ್ತು ಮೂವರು ಸ್ಪಿನ್ನರ್ ಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತದೆ. ಅನುಕುಲ್ ರಾಯ್ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಸುನೀಲ್ ನರೈನ್ ಅವರನ್ನು ಮಧ್ಯಮ ಓವರ್ ಗಳಲ್ಲಿ ಬಳಸುವ ಯೋಜನೆಯೂ ತಂಡಕ್ಕಿದೆ. ಆದರೆ ವರುಣ್ ಚಕ್ರವರ್ತಿ ಲಭ್ಯವಿಲ್ಲದಿದ್ದರೆ ಕೆಕೆಆರ್ ಬೌಲಿಂಗ್ ದಾಳಿಯ ಸಮತೋಲನದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

















