ಚಿಕ್ಕಮಗಳೂರು ಕೋಟೆ ಜನರ ಗ್ರಾಮ ದೇವತೆ ಕೊಲ್ಲಾಪುರದಮ್ಮನವರ ಅದ್ಧೂರಿ ಜಾತ್ರ ಮಹೋತ್ಸವದ ನಿಮಿತ್ತ ರಾಜ್ಯ ಮಟ್ಟದ ಬೃಹತ್ ಎತ್ತಿನಗಾಡಿ ರೇಸ್ ಚಿಕ್ಕಮಗಳೂರು ನಗರದ ಏರ್ಪೋರ್ಟ್ ಗ್ರೌಂಡ್ನಲ್ಲಿ ನಡೆಯಿತು. ಈ ಹಳ್ಳಿಕಾರ್ ಜೋಡಿ ಎತ್ತಿನಗಾಡಿ ರೇಸ್ಗೆ ದೊಡ್ಡಮ್ಮ ಸಿಪಾಯಿ, ಕಾಳಿಂಗ, ಕಬಿರ ಬ್ರಾಂಡ್ ರಾಕಿ, ಬಕಾಸುರ ನಂತಹ ಸೆಲೆಬ್ರಿಟಿ ಹಳ್ಳಿಕಾರ್ ತಳಿಗಳು ಬಂದು ಜೋಡಿ ಎತ್ತಿನಗಾಡಿ ಸ್ಪರ್ಧೆಯ ಗತ್ತನ್ನು ಹೆಚ್ಚಿಸಿದವು ಎನ್ನಲಾಗಿದೆ.
ಈ ಕುರಿತು ಮೈಸೂರು, ಹಾಸನ, ಬೆಳಗಾವಿ, ಮಂಡ್ಯ, ಚಾಮರಾಜನಗರ, ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜೊತೆಯಲ್ಲಿ ತಮಿಳುನಾಡು ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಿಂದ ಕೂಡ ಸ್ಪರ್ಧಾಳುಗಳು ಬಂದಿದ್ದರು. ಜಿಲ್ಲೆಯಲ್ಲಿ ಪ್ರತಿ ವರ್ಷ ಎತ್ತಿನಗಾಡಿ ಸ್ಪರ್ಧೆಯನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜನೆ ಮಾಡುತ್ತಾರೆ. ಈ ಸ್ಪರ್ಧೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಸ್ಪರ್ಧಿಗಳು ಆಗಮಿಸಿ, ಈ ವಿಶೇಷ ಕ್ರೀಡಾ ಕೂಟದಲ್ಲಿ ಜನಮನ ಸೆಳೆದು ಹೆಸರು ಮಾಡಿ ಹೋಗುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದಲೂ ಸ್ಪರ್ಧಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಈಗಾಗಲೇ ಎಲ್ಲ ಭಾಗದಲ್ಲಿ ಗದ್ದೆ, ಹೊಲದ ಕೆಲಸಗಳು ಮುಗಿದಿವೆ. ಹೀಗಾಗಿ ರೈತರು ಗದ್ದೆ ಹೊಲಗಳಲ್ಲಿ ಸಾಥ್ ಕೊಟ್ಟ ಎತ್ತುಗಳ ಜೊತೆ ರಿಲ್ಯಾಕ್ಸ್ ಮೂಡಿಗೆ ಇಳಿದಿದ್ದಾರೆ. ವರ್ಷವಿಡೀ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ರಾಸುಗಳಿಗೂ ರೈತರು ಮನರಂಜನೆ ನೀಡಿದ್ದಾರೆ. ಕುದುರೆಗಳಿಗೂ ಬೆವರು ಬರಿಸೋ ರೀತಿಯಲ್ಲಿ ಹೆಜ್ಜೆ ಹಾಕಿದ ರಾಸುಗಳು ನೋಡುಗರಿಗಂತೂ ಥ್ರಿಲ್ಲಿಂಗ್ ಅನುಭವ ನೀಡಿದವು.
ಕರ್ನಾಟಕದ ಜನರ ಬಲು ಇಷ್ಟದ ಆಟ ಅಂದರೆ ಇಂದಿನ ಕಾಲಕ್ಕೆ ಎತ್ತಿನ ಗಾಡಿ ರೇಸ್. ಇವತ್ತಿನ ಕಾಲದಲ್ಲಿ ಹುಡುಗರು ಕಾರ್ ಬೈಕ್ ತಗೊಳ್ಳುವುದು ಬಿಟ್ಟು ಒಳ್ಳೆ ಎತ್ತುಗಳನ್ನು ಖರೀದಿಸುವ ಹಠಕ್ಕೆ ಬಿದ್ದಿದ್ದಾರೆ. ಹಳ್ಳಿಕಾರ್ ರೇಸುಗಳ ಗತ್ತೇ ಹಾಗೆ. ಒಮ್ಮೆ ಅವುಗಳ ಮೈಕಟ್ಟು ಅವುಗಳ ಓಟದ ಸ್ಪೀಡ್ ಇವುಗಳೆಲ್ಲವೂ ಹಳ್ಳಿಕಾರ್ ಎತ್ತಿನ ಗತ್ತನ್ನು ಜಗತ್ತಿಗೆ ತೋರಿಸುವುದರಲ್ಲಿ ಅನುಮಾನವಿಲ್ಲ ಅದರಲ್ಲೂ ಚಿಕ್ಕಮಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಈ ಜೋಡಿ ಎತ್ತಿನಗಾಡಿ ಸ್ಪರ್ಧೆಗೆ ಇರುವ ಕ್ರೇಜ್ ಬೇರೆ ಲೆವೆಲ್ಗೆ ಇದೆ ಎನ್ನಬಹುದು.
ಈ ವೇಳೆ, ಈಟಿವಿ ಭಾರತದ ಜತೆ ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್ ಪ್ರತಿಕ್ರಿಯೆ ನೀಡಿ, ರೈತನಿಗೂ ಹಾಗೂ ಹೋರಿಗಳಿಗೂ ಅವಿನಾವಭಾವ ಸಂಬಂಧವಿದೆ. ಜೋಡೆತ್ತಿನ ಓಟದ ಸ್ಪರ್ಧೆ ರೈತರಿಗೆ ಮನರಂಜನೆ ಜೊತೆಗೆ ಕ್ರೀಡಾ ಸ್ಪೂರ್ತಿ ನೀಡುತ್ತಿದ್ದು, ಯುವಜನತೆ ಹೆಚ್ಚು ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈನಂದಿನ ದಿನ ಕೃಷಿ ಚಟುವಟಿಕೆ ಕೆಲಸಗಳಲ್ಲಿ ನಿರತರಾಗುವ ರೈತರಿಗೆ ಜೋಡೆತ್ತಿನ ಗಾಡಿ ಕ್ರೀಡಾ ಕೂಟಗಳು ಸಹಕಾರಿ. ಅಲ್ಲದೇ ರಾಸುಗಳು ಮತ್ತು ರೈತನ ನಡುವೆ ಬಾಂಧವ್ಯ ವೃದ್ಧಿಸಲು ಈ ಕ್ರೀಡೆ ಸ್ಪೂರ್ತಿಯಾಗಿದ್ದು, ಹೆಚ್ಚಿನ ಗ್ರಾಮೀಣ ಪ್ರದೇಶದ ಯುವಜನತೆ ಭಾಗಿಯಾಗುವುದು ಒಳ್ಳೆಯ ಬೆಳವಣಿಗೆ ಎಂದರು. ಸ್ಥಳೀಯರಾದ ಕೆ.ಆರ್. ಅನಿಲ್‌ಕುಮಾರ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯುವಕರು ಮೊಬೈಲ್ ಹಾಗೂ ಟಿವಿಗಳಿಗೆ ಅಂಟಿಕೊಂಡಿದ್ದಾರೆ. ಹೀಗಾಗಿ ಹೊರಾಂಗಣ ಕ್ರೀಡೆಗೆ ಹೆಚ್ಚು ಮನ್ನಣೆ ನೀಡುತ್ತಿಲ್ಲ. ಆದ್ದರಿಂದ ಹೆಚ್ಚು ಗ್ರಾಮೀಣ ಕ್ರೀಡೆಗಳಾದ ಜೋಡೆ ಎತ್ತಿನ ಗಾಡಿ, ಕಬ್ಬಡಿಯಂತಹ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳಬೇಕು. ಜೋಡೆತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಬೇಕು.
ಹೀಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ರೀತಿಯಲ್ಲಿ ಸ್ಪರ್ಧೆ ಯಶಸ್ವಿಗೊಳಿಸಿದರೆ, ಮುಂದೆಯೂ ಈ ರೀತಿಯ ಕಾರ್ಯಕ್ರಮ ನಡೆಸಲು ಆಯೋಜಕರು ಹೆಚ್ಚು ಮುಂದಾಗುತ್ತಾರೆ ಎಂದು ತಿಳಿಸಿದರು. ಸ್ಪರ್ಧಾ ಆಯೋಜಕ ಶ್ಯಾಮ್ ಮಾತನಾಡಿ, ಕರ್ನಾಟಕ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ಸುಮಾರು 62 ಜೋಡೆತ್ತು ಗಾಡಿ ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ನಾಲ್ಕು ತಂಡಗಳಿಗೂ ಟ್ರೊಫಿ ಮತ್ತು ನಗದು ಬಹುಮಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ಹೇಳಿದರು ಎನ್ನಬಹುದು.
















