ಬೆಳಗಾವಿಯಲ್ಲಿ ಅಕ್ಕ ಪಡೆಯು ಎರಡು ದಿನಗಳ ಅಂತರದಲ್ಲಿ ಎರಡು ಬಾಲ್ಯ ವಿವಾಹಗಳನ್ನು ತಡೆದು ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಬಾಲ್ಯ ವಿವಾಹ ಅಪರಾಧ ಅಂತಾ ಗೊತ್ತಿದ್ದರೂ ಪೋಷಕರು ಮದುವೆಗೆ ಮುಂದಾಗಿದ್ದರು. ಮಾಹಿತಿ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಅಕ್ಕ ಪಡೆ 13 ಮತ್ತು 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡಿದೆ. ಸದ್ಯ ಅಕ್ಕ ಪಡೆಯ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅಭಿನಂದಿಸಿದ್ದಾರೆ. ನಗರದ ವಂಟಮೂರಿ ಕಾಲೊನಿಯಲ್ಲಿ ಪೋಷಕರು 17 ವರ್ಷದ ಬಾಲಕಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಅಕ್ಕ ಪಡೆ ಅಲ್ಲಿ ಏನು ಕಾರ್ಯಕ್ರಮ ಮಾಡುತ್ತಿದ್ದಾರೆ ಅಂತಾ ನೋಡಲು ಹೋದಾಗ, ಬಾಲ್ಯ ವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಅದೇ ರೀತಿ, ಶಹಾಪುರದಲ್ಲಿ 13 ವರ್ಷದ ಬಾಲಕಿ ಮದುವೆ ಮಾಡುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಅಕ್ಕ ಪಡೆ ನೇತೃತ್ವದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬಾಲ್ಯ ವಿವಾಹ ತಡೆದಿದ್ದಾರೆ. ಸದ್ಯ ಈ ಎರಡು ಪ್ರಕರಣದಲ್ಲಿ ಬಾಲಕಿಯರ ತಂದೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ. ಅಕ್ಕ ಪಡೆಯ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯಿಂದ ಎರಡು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಆ ಇಬ್ಬರು ಬಾಲಕಿಯರನ್ನು ರಕ್ಷಿಸಿ, ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದೆ. ಬೆಳಗಾವಿ ನಗರದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಅಕ್ಕ ಪಡೆ ನಿಯೋಜನೆ ಮಾಡಲಾಗಿದ್ದು,
ಫೆ.17 (ಮಂಗಳವಾರ) ರಿಂದ ಅಕ್ಕ ಪಡೆ ಫಿಲ್ಡಿಗಿಳಿದಿದೆ. ಶಾಲಾ-ಕಾಲೇಜು, ಬಸ್ ನಿಲ್ದಾಣ, ಮಾರುಕಟ್ಟೆ ಹೀಗೆ ಪ್ರಮುಖ ಸ್ಥಳಗಳಲ್ಲಿ ಕಿಡಿಗೇಡಿಗಳಿಗೆ ಅಕ್ಕ ಪಡೆ ನಡುಕ ಹುಟ್ಟಿಸುತ್ತಿದೆ. ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಪ್ರತಿಕ್ರಿಯಿಸಿದ್ದು, ಅಕ್ಕ ಪಡೆ ಎರಡು ಶಿಫ್ಟ್ಗಳಲ್ಲಿ ನಗರದಲ್ಲಿ ಕೆಲಸ ಮಾಡುತ್ತಿದೆ. ಒಬ್ಬರು ಪಿಎಸ್ಐ ರ್ಯಾಂಕ್ ಅಧಿಕಾರಿ, ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ ಒಳಗೊಂಡ ತಂಡವು ಶಾಲಾ, ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮಹಿಳೆಯರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತಿದೆ. ಅದೇ ರೀತಿ ಎರಡು ದಿನಗಳಲ್ಲಿ ಎರಡು ಬಾಲ್ಯ ವಿವಾಹ ತಡೆದು, ಅತ್ಯುತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು ಎನ್ನಲಾಗಿದೆ.

















