ಮನೆ ಸುದ್ದಿ ಜಾಲ ಕಾರು-ಟ್ರಕ್ ನಡುವೆ ಭೀಕರ ಅಪಘಾತ, ಐವರಿಗೆ ಗಂಭೀರ ಗಾಯ : ಖಾನಾಪುರ–ತಾಳಗುಪ್ಪ ಹೆದ್ದಾರಿ

ಕಾರು-ಟ್ರಕ್ ನಡುವೆ ಭೀಕರ ಅಪಘಾತ, ಐವರಿಗೆ ಗಂಭೀರ ಗಾಯ : ಖಾನಾಪುರ–ತಾಳಗುಪ್ಪ ಹೆದ್ದಾರಿ

0

ಉತ್ತರ ಕನ್ನಡ ಶುಕ್ರವಾರ (ಮೇ 08): ಖಾನಾಪುರ–ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಾರು ಮತ್ತು ಟ್ರಕ್ ನಡುವೆ ನೇರ ಡಿಕ್ಕಿಯಾಗಿದ್ದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅದರಲ್ಲಿ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ಸಮೀಪ ಈ ಅಪಘಾತ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ಹತೋಟಿ ತಪ್ಪಿ, ಎದುರಿಗೆ ಬರುತ್ತಿದ್ದ ಟ್ರಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಮುಂಭಾಗದಿಂದ ಸಂಪೂರ್ಣವಾಗಿ ಜಖಂಗೊಂಡಿದ್ದು, ನೋಡುಗರ ಎದೆ ಝಲ್ಲೆನ್ನುವಂತಿತ್ತು. ಅಪಘಾತದ ಸಮಯದಲ್ಲಿ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಟ್ರಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಐವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆಯಲು ನೆರವಾಗಿದ್ದಾರೆ ಎನ್ನಲಾಗಿದೆ.

ಸದ್ಯ ಗಾಯಾಳುಗಳನ್ನು ತುರ್ತಾಗಿ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಅಪಘಾತವು ಹಳಿಯಾಳಕ್ಕೆ ಬರುತ್ತಿದ್ದ ಟ್ರಕ್ ಮತ್ತು ಅಳ್ನಾವರಕ್ಕೆ ತೆರಳುತ್ತಿದ್ದ ಕಾರಿನ ನಡುವೆ ನಡೆದಿದೆ. ರಾಜ್ಯ ಹೆದ್ದಾರಿಯ ಮಧ್ಯದಲ್ಲೇ ಅಪಘಾತ ಸಂಭವಿಸಿದ ಕಾರಣ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಈ ಕುರಿತು ವಿಷಯ ತಿಳಿದ ಕೂಡಲೇ ಹಳಿಯಾಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.