ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಅಡ್ಡ ಬಂದ ಬೀದಿ ನಾಯಿಯನ್ನ ಪಾರು ಮಾಡಲು ಹೋದ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಥಾರ್ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಅಪಘಾತದಲ್ಲಿ ಮೂವರು ಯುವತಿಯರು ಸೇರಿದಂತೆ 5 ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ನಗರ ಹೊರವಲಯದ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಪಘಾತದಲ್ಲಿ 5 ಮಂದಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಓರ್ವ ಯುವತಿ ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ. ಗಾಯಾಳುಗಳು ಆಂಧ್ರ ಮೂಲದವರು, ಬಾಶೆಟ್ಟಿಹಳ್ಳಿಯ ಪಿ.ಜಿಯಲ್ಲಿ ವಾಸವಾಗಿದ್ದರು. ರಜೆ ಹಿನ್ನಲೆ ನಿನ್ನೆ ಊರಿಗೆ ತೆರಳಿದ್ದ ಅವರು ಇಂದು ಬೆಳಗ್ಗೆ ಪಿಜಿಗೆ ವಾಪಸ್ ಬರುವ ವೇಳೆ ದುರ್ಘಟನೆ ಸಂಭವಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಘಟನೆ ಸಂಬಂಧ ನಗರಸಭೆ ಉಪಾಧ್ಯಕ್ಷರು ಮತ್ತು ಸ್ಥಳೀಯ ವಾರ್ಡ್ ಸದಸ್ಯರಾದ ಮಲ್ಲೇಶ್ ಮಾತನಾಡಿ, ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಪ್ರತಿ ದಿನ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಓಡಾಡುತ್ತಾರೆ. ರೈಲ್ವೆ ಸ್ಟೇಷನ್ ಭಾಗದಲ್ಲಿ ಜನದಟ್ಟನೆ ಹೆಚ್ಚಾಗಿದ್ದು, ವಾಹನಗಳ ಓಡಾಟ ಸಹ ಹೆಚ್ಚಾಗಿದೆ.
ಇದರಿಂದ ಸ್ಕೌಟ್ಸ್ ಕ್ಯಾಂಪ್ ರಸ್ತೆ ಮತ್ತು ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ. ರಸ್ತೆ ಅಪಘಾತಗಳಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದರಿಂದ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್, ಸೂಚನಾ ಫಲಕಗಳು ಮತ್ತು ರಸ್ತೆ ವಿಭಜಕ ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆ ಮತ್ತು ನಗರಸಭೆಗೆ ಮನವಿ ಮಾಡಲಾಗಿದೆ ಎಂದರು ತಿಳಿದುಬಂದಿದೆ.

















