ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಚಾರ್ಮಾಡಿ ಘಾಟ್ನಲ್ಲಿ ಭಾನುವಾರ ಒಂಟಿ ಸಲಗ ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಚಾರ್ಮಾಡಿ ಘಾಟ್ನ 10ನೇ ತಿರುವಿನ ಬಳಿ ರಸ್ತೆಯ ಮಧ್ಯೆ ಕಾಡಾನೆ ನಿಂತ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಮಲೆನಾಡು ಭಾಗದಲ್ಲಿ ಮಳೆ ಹಾಗೂ ದಟ್ಟ ಅರಣ್ಯ ವಾತಾವರಣದ ನಡುವೆ ಆನೆಗಳು ರಸ್ತೆ ಸಮೀಪ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ, ಭಾನುವಾರ ರಸ್ತೆಯ ಮಧ್ಯ ಭಾಗದಲ್ಲೇ ಒಂಟಿ ಸಲಗ ನಿಂತಿದ್ದರಿಂದ ವಾಹನ ಸವಾರರು ಭಯಭೀತರಾಗಿದ್ದರು ಎಂದು ತಿಳಿದುಬಂದಿದೆ.
ಕೆಲ ವಾಹನ ಚಾಲಕರು ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಕಾದು ನಿಂತರೆ, ಇನ್ನೂ ಕೆಲವರು ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿಯಲು ಮುಂದಾದರು. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಚಾರ್ಮಾಡಿ ಘಾಟ್ ಮೂಲಕ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನಡುವೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾರಾಂತ್ಯದ ಹಿನ್ನೆಲೆ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿ, ಆನೆಯ ಸಮೀಪ ಹೋಗದಂತೆ ಸೂಚನೆ ನೀಡಿದರು. ಆದರೆ ಒಂಟಿ ಸಲಗ ಕೆಲ ಸಮಯ ರಸ್ತೆ ಮಧ್ಯೆ ಅಲೆದಾಡಿದ ಬಳಿಕ ಅರಣ್ಯದತ್ತ ತೆರಳಿತು. ನಂತರ ವಾಹನಸವಾರರು ಸಂಚಾರ ಆರಂಭಿಸಿದರು ಎನ್ನಲಾಗಿದೆ.
ಆದರೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಇತ್ತೀಚೆಗೆ ಕಾಡಾನೆಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ ರಾತ್ರಿ ಸಮಯದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಹೀಗೆ ಕಳೆದ ವಾರವು ಇದೇ ರೀತಿ ಈ ಕಾಡಾನೆ ರಸ್ತೆಯ ಮಧ್ಯೆ ಬಂದು ನಿಂತು ಪ್ರವಾಸಿಗರಿಗೆ ಹಾಗೂ ರಸ್ತೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ಕಳೆದ ವಾರವೂ ಗಂಟೆಗಟ್ಟಲೆ ಈ ರಸ್ತೆಯಲ್ಲಿ ಟ್ರಾಫಿಕ್ ಜಾಬ್ ಉಂಟಾಗಿತ್ತು. ಈ ಕಾಡಾನೆ ಪದೇ ಪದೆ ಇದೇ ಭಾಗದಲ್ಲಿ ಸಂಚಾರ ಮಾಡುತ್ತಿದ್ದು, ಯಾರ ಭಯವೂ ಇಲ್ಲದೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಂದು ನಿಲ್ಲುತ್ತಿದೆ. ಕೂಡಲೇ ಈ ಕಾಡಾನೆಯನ್ನು ಬೇರೆಡೆ ಸ್ಥಳಾಂತರ ಮಾಡಿ, ಯಾವುದೇ ಭಯವಿಲ್ಲದೆ ಈ ರಸ್ತೆಯಲ್ಲಿ ಪ್ರಯಾಣ ಮಾಡಲು ಅನುಕೂಲ ಮಾಡಿ ಕೊಡಬೇಕು ಎಂದು ಪ್ರಯಾಣಿಕರು ಹಾಗೂ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

















