ಬೆಂಗಳೂರು : ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಬಳಿ ಜಿಲೆಟಿನ್ ಪತ್ತೆ ವಿಚಾರ NIA ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ಮೋದಿ ಅವರನ್ನ ನೈಸ್ ರೋಡ್‌ನಲ್ಲಿ ಇಳಿಸಲಾಯ್ತು. ನೈಸ್ ರೋಡ್‌ನಿಂದ ದೂರ ಪ್ರಯಾಣ, ಅದಕ್ಕೆ ಭದ್ರತೆಯ ಲೋಪ ಚರ್ಚೆ ಆಗ್ತಿದೆ. ಅತ್ಯಂತ ಹೆಚ್ಚು ರಿಸ್ಕಿ ಪ್ರಧಾನಿ ಇಡೀ ಪ್ರಪಂಚದಲ್ಲಿ ಇರೋರು ಮೋದಿ ಅವರು ಅಂತ ಹೇಳ್ತಾರೆ. ಬೇರೆ ಬೇರೆ ದೇಶಕ್ಕೆ ಹೋದಾಗ ಆಯಾ ದೇಶ ಭದ್ರತೆಗೆ ಕಾಳಜಿ ವಹಿಸ್ತಾರೆ. ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಮೋದಿ ಅವರ ರಕ್ಷಣೆ ಬಗ್ಗೆ, ಅವರ ಭದ್ರತೆ ಬಗ್ಗೆ ಕಾಳಜಿ ಇದೆಯಾ ಎಂದು ಪ್ರಶ್ನಿಸಿದರು.
ಪೊಲೀಸ್ ಇಲಾಖೆಯನ್ನ ದುರ್ಬಲ ಮಾಡೋ ಕೆಲಸ ರಾಜ್ಯ ಸರ್ಕಾರ ಮಾಡಿದೆ. ನಿನ್ನೆ ಪ್ರಧಾನಿ ಬರ್ತಾರೆ ಅಂತ ಗೊತ್ತಿದ್ದರೂ, 100ಕ್ಕಿಂತ ಹೆಚ್ಚು ಇನ್‌ಸ್ಪೆಕ್ಟರ್ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡೋ ನಿರ್ಧಾರ ಸರ್ಕಾರ ಮಾಡಿದೆ ಯಾಕೆ? ಪೊಲೀಸರು, ಅಧಿಕಾರಿಗಳ ಮನಸಿನಲ್ಲಿ ಗೊಂದಲ ಇರುತ್ತದೆ. ಇಂತಹ ತುರ್ತಿನ ಸಮಯದಲ್ಲಿ ಪೊಲೀಸರ ವರ್ಗಾವಣೆ ತುರ್ತಾಗಿ ಮಾಡೋ ಅಗತ್ಯ ಏನಿತ್ತು ಗೊತ್ತಿಲ್ಲ.
ರಾಜ್ಯ ಸರ್ಕಾರ ಇದಕ್ಕೆ ಉತ್ತರ ಹೇಳಬೇಕು. ಪ್ರಧಾನಿ ಬರುವ ದಾರಿಯಲ್ಲಿ ಯಾಕೆ ಇವರು ಕಾಳಜಿವಹಿಸಿಲ್ಲ. ಅಲ್ಲಿ ಜಿಲೆಟಿನ್ ಕಡ್ಡಿ ಮತ್ತು ಅದನ್ನು ಜೋಡಿಸಲು ವೈಯರ್ ಕೂಡಾ ಸಿಕ್ಕಿದೆ. ಯಾಕೆ ಅಲ್ಲಿಗೆ ಬಂತು? ಯಾರು ತಂದು ಹಾಕಿದ್ರು? ತಂದಿರೋರ ಬಗ್ಗೆ ಯಾಕೆ ಗಮನ ಕೊಟ್ಟಿಲ್ಲ. ಅಲ್ಲಿ ಬ್ರಿಸ್ಕಿಂಗ್ ಯಾಕೆ ಆಗಿಲ್ಲ. ಇದೆಲ್ಲವನ್ನು ಗಮನಿಸಬೇಕಾಗಿದೆ ಅಂತ ತಿಳಿಸಿದರು.
ದೇಶದ ಪ್ರಧಾನಿಯನ್ನ ಕೇವಲ ಪಕ್ಷ ರಾಜಕಾರಣದಿಂದ ನೋಡುತ್ತಿದೆಯಾ ಅಥವಾ ದೇಶದ ಪ್ರಧಾನಿ ಅಂತ ಕಾಳಜಿವಹಿಸುತ್ತಿದೆಯಾ? ನಮ್ಮ ಮುಂದೆ ಇರೋ ಪ್ರಶ್ನೆ ಬಗ್ಗೆ ಸಮಗ್ರ ತನಿಖೆ ಆಗಬೇಕು. NIA ತನಿಖೆ ಆಗಬೇಕು. ನಮ್ಮ ದೇಶದ ಪ್ರಧಾನಿ ಅವರ ರಕ್ಷಣೆ ಬಹಳ ಮುಖ್ಯ. ಆಯಾ ದೇಶಕ್ಕೆ ಅವರ ಪ್ರಧಾನಿಗಳ ರಕ್ಷಣೆ ಮುಖ್ಯ. ನಮ್ಮ ದೇಶದಲ್ಲಿ ಪ್ರಧಾನಿಗಳ ಬಗ್ಗೆ ದುರ್ಘಟನೆ ಆದಾಗ ನಮಗೆ ದುಃಖ ಆಗಿತ್ತು. ಯಾಕಂದ್ರೆ ಅವರು ಯಾವುದೇ ಪಕ್ಷದ ನಾಯಕರಲ್ಲ, ದೇಶದ ಪ್ರಧಾನಿ ಅಂತ. ದೇಶದ ಪ್ರಧಾನಿಗಳ ಬಗ್ಗೆ ಇಂತಹ ವರದಿಗಳು ಬಂದರೆ ಸಹಜವಾಗಿ ದೇಶ ವೀಕ್ ಆಗುತ್ತದೆ. ವೈರಿ ದೇಶಗಳು ನಗುವಂತೆ ಆಗುತ್ತದೆ. ಅದಕ್ಕಾಗಿ ಈ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
















