ಮನೆ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮ ರಥೋತ್ಸವದ ಸಂಭ್ರಮ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮ ರಥೋತ್ಸವದ ಸಂಭ್ರಮ

0

ಮಂಗಳೂರು: ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ ವೈಭವದಿಂದ ಜರುಗಿತು.

ಮಂಗಳವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ರಥಾರೂಢರಾದ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಬೀದಿಯಲ್ಲಿ ಸಂಚರಿಸಿದ್ದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಬೆಳಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥಾರೋಹಣ ನಡೆಯಿತು. ಉಮಾಮಹೇಶ್ವರ ದೇವರು ಆಸೀನರಾದ ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸೋಮವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿಯಲ್ಲಿ ಭಾಗವಹಿಸಲೆಂದು ದೂರದ ಊರುಗಳಿಂದ ಸಾಕಷ್ಟು ಭಕ್ತರು ಬಂದಿದ್ದಾರೆ. ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದೆ. ಕೃಷಿಮೇಳವೂ ಜನರ ಗಮನ ಸೆಳೆಯುತ್ತಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಸುಬ್ರಹ್ಮಣ್ಯ ಪೇಟೆ ದೀಪಾಂಲಕೃತ ಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ವಿವಿಧೆಡೆ ಅಳವಡಿಸಿರುವ ಪ್ರಭಾವಳಿಗಳು ಮತ್ತು ದೇವರ ಕಲಾಕೃತಿಗಳು ಜಾತ್ರೆಯ ವೈಭವವನ್ನು ಹೆಚ್ಚಿಸಿವೆ.

ಈ ಬಾರಿ ರಥಕ್ಕೆ ಬಳಸಿದ ಬೆತ್ತವನ್ನು ದೇವಳವೇ ಉಪಯೋಗಿಸಲು ನಿರ್ಧರಿಸಿದೆ. ದೇಗುಲದಲ್ಲಿ ವಿವಿಧ ಸೇವೆ ಸಲ್ಲಿಸಿದವರಿಗೆ ಕೊಡುವ ಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತದೆ. ಭಕ್ತರಲ್ಲಿ ಬೆತ್ತಕ್ಕಾಗಿ ಪೈಪೋಟಿ ನಡೆಯಬಾರದು, ಭಕ್ತರಿಗೆ ಕೊಡಲು ಬೆತ್ತದ ತುಂಡು ಕಡಿಮೆಯಾಗಬಾರದು ಎನ್ನುವ ಕಾರಣಕ್ಕೆ ದೇಗುಲ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಜನರು ಸೇರಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಸಲ ಅದ್ಧೂರಿಯಾಗಿ ಬ್ರಹ್ಮರಥೋತ್ಸವ ಜರುಗಿದೆ.

ಹಿಂದಿನ ಲೇಖನಪರೋಪಕಾರಕ್ಕಿದೆ ಈ ಜೀವನ
ಮುಂದಿನ ಲೇಖನಮಹಾರಾಷ್ಟ್ರ ಪೊಲೀಸ್ ಇಲಾಖೆಯ 18 ಸಾವಿರ ಹುದ್ದೆಗೆ 11 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ