ಬೆಂಗಳೂರು : ದೇಶದ ಹಿತದೃಷ್ಟಿಯಿಂದ ಚಿನ್ನ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ನಾಯಕರು ಈಗ ತಿರುಗೇಟು ನೀಡಲು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನೆನಪಿನ ಶಕ್ತಿ ನಿಗೂಢವಾಗಿ ಕೆಲಸ ಮಾಡುತ್ತದೆ ಎಂದು ಟೀಕಿಸಿದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಈ ಹಿಂದೆ ಕಾಂಗ್ರೆಸ್ ಸರ್ಕಾರಗಳೂ ಸಹ ಇದೇ ರೀತಿಯ ನಿಲುವು ತಳೆದಿದ್ದವು ಎಂದು ಹೇಳಿ ಮೋದಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
1967 ರಲ್ಲಿ ಇಂದಿರಾ ಗಾಂಧಿಯವರು ಭಾರತೀಯರು ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಕೇಳಿದಾಗ ಅದನ್ನು “ರಾಷ್ಟ್ರೀಯ ಶಿಸ್ತು” ಎಂದು ಕರೆಯಲಾಯಿತು. 2013 ರಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಿನ್ನ ಖರೀದಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದಾಗ”ಆರ್ಥಿಕ ಜವಾಬ್ದಾರಿ” ಎಂದು ಕರೆಯಲಾಯಿತು. ಈಗ ಇದೇ ರೀತಿಯ ಮನವಿ ಮಾಡಿದಾಗ ಕಾಂಗ್ರೆಸ್ ನಾಯಕರು ಏನೋ ಸಂಭವಿಸಿದೆ ಎಂಬಂತೆ ವರ್ತಿಸುತ್ತಾರೆ.
ಸಮಸ್ಯೆಯೆಂದರೆ ಪ್ರಧಾನಿ ಮೋದಿಜಿಯವರ ನೇತೃತ್ವದಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವಾಸ, ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ನಿರ್ವಹಿಸಲಾಗುತ್ತಿದೆ ಎಂಬ ಅಂಶವನ್ನು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಮತ್ತು ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಇದೇ ರೀತಿಯ ಆರ್ಥಿಕ ಶಿಸ್ತಿಗೆ ಕರೆ ನೀಡಿದಾಗ, ಕಾಂಗ್ರೆಸ್ ನಾಯಕರು ಇದುವರೆಗೂ ಸಂಭವಿಸದ ಏನೋ ಒಂದು ವಿಚಿತ್ರ ನಡೆಯೆಂಬಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುವ ಮೊದಲು, ತಮ್ಮದೇ ಪಕ್ಷದ ಹಳೆಯ ಹೇಳಿಕೆಗಳ ದಿನಚರಿಯನ್ನುಒಮ್ಮೆ ತಿರುವಿ ಹಾಕಬೇಕು ಎಂದು ಖಾರವಾಗಿ ಬರೆದಿದ್ದಾರೆ.

















