ಮನೆ ಸುದ್ದಿ ಜಾಲ ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ, ದಾಖಲೆಗಳ ಪುನರ್ ಪರಿಶೀಲನೆ..!

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ, ದಾಖಲೆಗಳ ಪುನರ್ ಪರಿಶೀಲನೆ..!

0

ಕೊಪ್ಪಳ : ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ನೀಡಿದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಿಚಾರದಲ್ಲಿ ಈಗ ಗೊಂದಲ ಮೂಡಿದ್ದು, ಜಿಲ್ಲಾಡಳಿತವು ದಾಖಲೆಗಳ ಮರುಪರಿಶೀಲನೆಗೆ ಮುಂದಾಗಿದೆ. ಪಂಚನಾಮ ಪ್ರಕ್ರಿಯೆಯ ನಂತರ ಎಲ್ಲಾ ಆಭರಣಗಳನ್ನು ದೇವಸ್ಥಾನದ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜನಾರ್ದನ ರೆಡ್ಡಿ ಅವರ ಆಪ್ತರೆನ್ನಲಾದ ಎಎಂಆರ್ ಪ್ರೈವೇಟ್ ಲಿಮಿಟೆಡ್‌ನ ಉದ್ಯಮಿ ಮಹೇಶ್ ರೆಡ್ಡಿ ಅವರು ಕಳೆದ ಮೇ 8ರಂದು ದೇವಸ್ಥಾನಕ್ಕೆ ವಿವಿಧ ಆಭರಣ ಹಾಗೂ ಕವಚಗಳನ್ನು ದೇಣಿಗೆಯಾಗಿ ನೀಡಿದ್ದರು. ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಸಲಾಗಿದೆ ಎಂದು ದಾನಿಗಳ ಪರವಾಗಿ ಹಾಜರಿದ್ದ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದರು. ಅವರ ಪ್ರಕಾರ ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಆಗಿತ್ತು.

ಆದರೆ ಸರ್ಕಾರದ ಪರವಾಗಿ ಆಭರಣಗಳನ್ನು ಪರಿಶೀಲಿಸಿದ ಅಕ್ಕಸಾಲಿಗರು ಮತ್ತು ಬ್ಯಾಂಕ್ ಮೌಲ್ಯಮಾಪಕರು ಭಿನ್ನವಾದ ವರದಿ ನೀಡಿದ್ದಾರೆ. ತಾಮ್ರದ ಕವಚಗಳಿಗೆ ಲೇಪನ ಮಾಡಲಾದ ಬಂಗಾರದ ತೂಕವು ಅಂದಾಜು 250 ಗ್ರಾಂನಿಂದ 300 ಗ್ರಾಂ ಮಾತ್ರ ಇರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಾನಿಗಳು ಹೇಳಿದ ತೂಕಕ್ಕೂ ಮತ್ತು ತಜ್ಞರ ಅಂದಾಜಿಗೂ ಭಾರಿ ವ್ಯತ್ಯಾಸ ಕಂಡುಬಂದಿರುವುದರಿಂದ ಗೊಂದಲ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಭರಣಗಳಿಗೆ ಸಂಬಂಧಿಸಿದ ಬಿಲ್, ಇನ್‌ವಾಯ್ಸ್ ಮತ್ತು ಪ್ರಮಾಣಪತ್ರಗಳನ್ನು ಸಲ್ಲಿಸಲು ಮೇ 12ರ ಗಡುವು ನೀಡಿದ್ದರು. ಅದರಂತೆ ಉದ್ಯಮಿಯ ಪರವಾಗಿ ಗುಂಡಾಚಾರಿ ಸ್ಥಪತಿ ಅವರು ಮೇ 11ರಂದು ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಈಗ ದಾನಿಗಳು ನೀಡಿದ ಬಿಲ್‌ಗಳು ಮತ್ತು ಮಜೂರಿ ವಿವರಗಳನ್ನು ಆಧರಿಸಿ, ಜಿಲ್ಲಾಡಳಿತವು ಎಲ್ಲಾ ದಾಖಲೆಗಳನ್ನು ಪುನಃ ಪರಿಶೀಲಿಸಲಿದೆ.