ಮನೆ ಸುದ್ದಿ ಜಾಲ ಯದುವೀರ್‌ : ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಬಿಲ್ಡಿಂಗ್ ಗೆ ಸುಪ್ರೀಂ ಕೋರ್ಟ್ ಹೇಳಿದಂತೆ ಸರ್ಕಾರ...

ಯದುವೀರ್‌ : ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಬಿಲ್ಡಿಂಗ್ ಗೆ ಸುಪ್ರೀಂ ಕೋರ್ಟ್ ಹೇಳಿದಂತೆ ಸರ್ಕಾರ ಸಂರಕ್ಷಿಸಬೇಕು

0

ಮೈಸೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೈಸೂರು ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಸಂಸದ ಯದುವೀರ್​ ಒಡೆಯರ್ ಆಗ್ರಹಿಸಿದ್ದಾರೆ. ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಆಹ್ವಾನದ ಮೇರೆಗೆ ಸೋಮವಾರ ಸಂಜೆ ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು, ವ್ಯಾಪಾರಸ್ಥರಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು ದೇವರಾಜ ಮಾರುಕಟ್ಟೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ನೆಲಸಮಗೊಳಿಸದೇ ಸಂರಕ್ಷಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎನ್ನಲಾಗಿದೆ.

ಆದರಿಂದ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸದೇ ಸಂರಕ್ಷಣೆ ಮೂಲಕ ಪುನರುಜ್ಜಿವನಗೊಳಿಸಬೇಕೆಂದು ನಾನು ಅರಮನೆಗೆ ಬರುವ ಮುಂಚೆಯಿಂದಲೇ ಸ್ಥಳೀಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ನನಗೂ ಹೋರಾಟದಲ್ಲಿ ಕೈಜೋಡಿಸಲು ಅವಕಾಶ ಕೊಟ್ಟಿದ್ದಾರೆ. ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದಂತಾಗಿದೆ. ರಾಜ್ಯ ಸರ್ಕಾರ ಕೂಡ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಬೇಕು. ಈ ವಿಚಾರ ಸಂಬಂಧ ಮೇಲ್ಮನವಿ ಮೂಲಕ ಕೋರ್ಟ್‌ನಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮೇಲ್ಮನವಿ ಮೂಲಕ ಮುಂದುವರೆಯುತ್ತೇವೆ ಎಂದು ಜಿಲ್ಲಾಧಿಕಾರಿಗಳು ನಿಲುವು ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಅದನ್ನು ಮಾಡಬಾರದೆಂದು ಆಗ್ರಹಿಸುತ್ತೇನೆ ಎಂದರು. ಹಾಗೂ ಈ ಎರಡೂ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣಕ್ಕೆ ಮೀಸಲಿಟ್ಟ ಹಣವನ್ನು ಸಂರಕ್ಷಣೆ ಕಾಮಗಾರಿಗೆ ನೆಲಸಮಗೊಳಿಸದೇ ಬಳಸ ಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರತ ಬರೆದಿದ್ದೇನೆ. ಒಂದೊಂದು ಭಾಗ ಬಿಟ್ಟುಕೊಟ್ಟು ಸಂರಕ್ಷಣೆ ಕಾಮಗಾರಿಗೆ ಎಲ್ಲಾ ಅಗತ್ಯ ಸಹಕಾರ ನೀಡಲು ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರು ಸಿದ್ಧರಿದ್ದಾರೆ. ಬಹಳಷ್ಟು ಐತಿಹಾಸಿಕ ಮಾರುಕಟ್ಟೆಗಳನ್ನು ಸಂರಕ್ಷಣೆ ಮಾಡಿರುವುದಕ್ಕೆ ವಿಶ್ವದಾದ್ಯಂತ ಉದಾಹರಣೆಗಳಿವೆ. ಅದೇನು ಕಷ್ಟವಲ್ಲ ಮನಸ್ಸು ಬೇಕಷ್ಟೇ ಎಂದು ತಿಳಿಸಿದರು ಎನ್ನಲಾಗಿದೆ.

ಇದರಿಂದ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಪುನರ್ ನಿರ್ಮಿಸುವುದರ – ವಿರುದ್ಧ 2005ರಿಂದಲೂ ಹೋರಾಟ ನಡೆಯುತ್ತಿದ್ದು, ಆಗಲೇ ಹೋರಾಟಗಾರರ ಮನವಿಗೆ ಸ್ಪಂದಿಸಿ ಸಂರಕ್ಷಣೆ ಕಾಮಗಾರಿ ಕೈಗೊಂಡಿದ್ದರೆ ಕಟ್ಟಡದ ಶಿಥಿಲಾವಸ್ಥೆ ಪ್ರಮಾಣ ತಗ್ಗಿಸಬಹುದಿತ್ತು ಎಂದು ಹೇಳಿದರು. ಮಾರುಕಟ್ಟೆ ಸಂರಕ್ಷಣೆಗಾಗಿ 2005‌ ರಿಂದಲೂ ನಾನಾ ಹೋರಾಟ ನಡೆಯುತ್ತಲೇ ಇದೆ. ಈವರೆಗೂ ಸತತವಾಗಿ ನೆಲಸಮಗೊಳಿಸಿಯೇ ಪುನರ್ ನಿರ್ಮಾಣ ಮಾಡಬೇಕೆಂಬ ನಿಲುವು ಹೊಂದುತ್ತಾ ಬರಲಾಗಿದೆ. ಆಗಲೇ ಸ್ಪಂದಿಸಿದ್ದರೆ ಕಟ್ಟಡ ಇಷ್ಟು ಶಿಥಿಲಾವಸ್ಥೆ ತಲುಪುತ್ತಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ದೇವರಾಜ ಮಾರುಕಟ್ಟೆಯ ಒಂದು ಭಾಗ ಕುಸಿದಿತ್ತು ಎಂಬುದಕ್ಕೆ ಪ್ರತಿಕ್ರಿಯಿಸಿ, ಅದು ಯಾವ ರೀತಿ ಕುಸಿದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. ಮತ್ತು ರಾತ್ರೋರಾತ್ರಿ ಡ್ರಿಲ್ಲಿಂಗ್ ಮೂಲಕ ಕೆಡವಿದ್ದರು ಎಂಬುದು ಎಲ್ಲಗೂ ಗೊತ್ತಿದೆ. ಆ ಸಂಬಂಧ ವಿಡಿಯೋಗಳು ಇವೆ. ಇದಾದ ಬಳಿಕ ದೊಡ್ಡ ಮಟ್ಟದಲ್ಲಿ ಸಾಕಷ್ಟು ಬಾರಿ ಮಳೆ ಸುರಿದಿದೆ. ಅಂತಹ ಮಳೆ ಬಂದಾಗಲೂ ಕಟ್ಟಡ ಸದೃಢವಾಗಿದೆ. ಇಂದಿನ ಆಧುನಿಕ ಕಾಲದ ಸೌಲಭ್ಯಗಳನ್ನು ಸಂರಕ್ಷಣೆ ಪ್ರಕ್ರಿಯೆ ವೇಳೆ ಮಾರುಕಟ್ಟೆಯಲ್ಲಿ ಒದಗಿಸಲು ಅವಕಾಶವಿದೆ. ಸಂರಕ್ಷಣೆ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲು ಸಮಸ್ತ ವ್ಯಾಪಾರಸ್ಥರು ತಯಾರಿದ್ದಾರೆ ಎಂದು ಹೇಳಿದರು.

ಹಾಗೂ ವಾಣಿವಿಲಾಸ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರುಕಟ್ಟೆಗಳ ಬಗ್ಗೆ ಪರಿಶೀಲಿಸಬೇಕಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋರ್ಟ್ ನಿರ್ದೇಶನದಿಂದ ಸರ್ಕಾರ ಪ್ರೇರಣೆಗೊಂಡು ಮಾರುಕಟ್ಟೆ ಸಂರಕ್ಷಣೆ ಮಾಡುವ ಮೂಲಕ ಎಲ್ಲಾ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಬಹುದು. ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಜಾಗಗಳಲ್ಲಿ ಸಹ ಮಾರುಕಟ್ಟೆ ನಿರ್ಮಿಸಬೇಕಿದೆ. ಇದು ಗ್ರೇಟರ್ ಮೈಸೂರು ಯೋಜನೆಯಲ್ಲಿ ಇದೆಯೋ ಇಲ್ಲವೋ ಮಾಹಿತಿ ಇಲ್ಲ. ಆದರೆ ಇಲ್ಲವಾದರೆ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.