ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮನೆಯಲ್ಲೇ ದಿಲೀಪ್ ರಾಜ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೂ ಅವರು ಬದುಕುಳಿಯಲಿಲ್ಲ. ದಿಲೀಪ್ ರಾಜ್ ನಿಧನಕ್ಕೆ ಚಿತ್ರರಂಗದ ಅನೇಕರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ ಎನ್ನಲಾಗಿದೆ.
ಮಿಲನ, ಯು ಟರ್ನ್, ಆರ್ಕೆಸ್ಟ್ರಾ ಮೈಸೂರು, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು, ಸೇರಿದಂತೆ ಹಲವು ಚಿತ್ರಗಳಲ್ಲಿ ದಿಲೀಪ್ ರಾಜ್ ಅವರು ನಟಿಸಿದ್ದರು. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ಅವರು ನಿರ್ಮಾಣ ಮಾಡಿದ್ದರು. ದಿಲೀಪ್ ರಾಜ್ ನಿಧನಕ್ಕೆ ಹಿರಿಯ ನಟ ದೊಡ್ಡಣ್ಣ ಸಂತಾಪ ಸೂಚಿಸಿದ್ದಾರೆ. ‘ದಿಲೀಪ್ ರಾಜ್ ಅವರ ತಂದೆ ಹೆಚ್.ಎಂ. ಶಿವರುದ್ರಪ್ಪ. ಅವರು ಮೂಲತಃ ಅರಸಿಕೆರೆಯವರು. ನಮ್ಮ ಅಣ್ಣ ಹಾಗೂ ಅವರು ಒಟ್ಟಿಗೆ ಓದಿದವರು. ಹೀಗೆ 48ನೇ ವಯಸ್ಸಿಗೆ ದಿಲೀಪ್ ರಾಜ್ ನಿಧನರಾದರು. ಕನ್ನಡ ಕಿರುತೆರೆ, ಸಿನಿಮಾ ಕಲಾವಿದರು ದಿಲೀಪ್ ರಾಜ್ ಅವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ ಎನ್ನಲಾಗಿದೆ.
















