ಬೆಂಗಳೂರು: ಪತ್ನಿಗೆ ಜೀವನಾಂಶದ ಹಣ ನೀಡದೆ ವಿನಾಃಕಾರಣ ವಿಳಂಬ ಮಾಡುತ್ತಿದ್ದ ಪತಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆತನ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ಅನ್ನು ಎತ್ತಿಹಿಡಿದಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜೀವನಾಂಶ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಪತಿ ಸೈಲೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಧ ರಾವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಪಾಲಿಸದೆ ಇರುವ ಪತಿಯ ವರ್ತನೆಯು ಉದ್ದೇಶಪೂರ್ವಕ ಅವಿಧೇಯತೆಯಾಗಿದೆ ಎಂದು ತಿಳಿಸಿದೆ ಎನ್ನಲಾಗಿದೆ.
ಈ ಕುರಿತ್ತಾಗಿ ಜೀವನಾಂಶ ಎನ್ನುವುದು ಕೇವಲ ಘೋಷಣೆಯಲ್ಲ. ಅದಕ್ಕೆ ಬದ್ಧನಾಗಿರುವ ವ್ಯಕ್ತಿಗೆ ಹೇರಲಾದ ನಿರಂತರ ಬಾಧ್ಯತೆಯಾಗಿದೆ. ವಿಚಾರಣೆ ಬಾಕಿ, ಮಧ್ಯಂತರ ಆದೇಶಗಳ ನೆಪದಲ್ಲಿ ಜೀವನಾಂಶ ಕುರಿತ ನ್ಯಾಯಾಲಯದ ಆದೇಶವನ್ನು ಮುಂದೂಡಲು ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶ ಜಾರಿ ಮಾಡುವುದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 125(3)ಅಡಿಯಲ್ಲಿ ಬಂಧನ ವಾರಂಟ್ ಜಾರಿಗೆ ಅವಕಾಶವಿದೆ ಎಂದು ಪೀಠ ಹೇಳಿದೆ. ಅರ್ಜಿದಾರ ಪತಿಗೆ ಪ್ರಕರಣ ಸಂಬಂಧ ಕಾರಣ ತಿಳಿಸುವುದಕ್ಕೆ ಸೂಕ್ತ ಕಾಲಾವಕಾಶ ನೀಡಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಪಾಲಿಸದೆ, ಜೀವನಾಂಶ ನೀಡದಿರುವುದಕ್ಕೆ ಸೂಕ್ತ ಕಾರಣವನ್ನು ನೀಡುವುದಕ್ಕೆ ಅವರು ವಿಫಲವಾಗಿದ್ದಾರೆ. ಈ ಅಂಶ ಹಾಗೂ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಕೌಟುಂಬಿಕ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಇದನ್ನು ಸಂವಿಧಾನದ ಪರಿಚ್ಚೇದ 21 ರ ಉಲ್ಲಂಘನೆ ಎನ್ನಲಾಗದು ಎಂದು ಪೀಠ ತಿಳಿಸಿದೆ. ಆಸ್ತಿ ಜಪ್ತಿ ಕಡ್ಡಾಯ ನಿಯಮವಿಲ್ಲ: ಅರ್ಜಿದಾರರು ನಿರಂತರವಾಗಿ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆ. ಜೊತೆಗೆ, ನ್ಯಾಯಾಲಯದ ಬಲವಂತದ ಕ್ರಮವನ್ನು ಪ್ರಶ್ನಿಸಲು ಮುಂದಾಗಿದ್ದಾರೆ.
ಈ ರೀತಿಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಲುಕ್ಔಟ್ ನೋಟಿಸ್ನಲ್ಲಿ ಮಧ್ಯಪ್ರವೇಶ ಮಾಡಬೇಕು ಎಂಬುದು ಯಾವುದೇ ಸಕಾರಣವಲ್ಲ. ಜೀವನಾಂಶ ಪಾವತಿಸದಿದ್ದಲ್ಲಿ ದಂಡ ವಿಧಿಸುವ ಅಥವಾ ಜೈಲಿಗೆ ಕಳುಹಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಬಂಧನಕ್ಕೂ ಮುನ್ನ ಆಸ್ತಿ ಜಪ್ತಿ ಮಾಡಲೇಬೇಕೆಂಬ ಕಡ್ಡಾಯ ನಿಯಮವಿಲ್ಲ. ಸತತವಾಗಿ ಹಣ ಪಾವತಿಸದಿದ್ದಾಗ ಇಂತಹ ಕಠಿಣ ಕ್ರಮಗಳು ಅತ್ಯಗತ್ಯ ಎಂದು ಪೀಠ ಹೇಳಿದೆ. ಜೀವನಾಂಶ ನೀಡುವ ಕಾನೂನಿನ ಮೂಲ ಉದ್ದೇಶವೇ ಅಸಹಾಯಕ ಪತ್ನಿ ಮತ್ತು ಮಕ್ಕಳಿಗೆ ಆರ್ಥಿಕ ಭದ್ರತೆ ನೀಡುವುದಾಗಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಪತಿಯ ಅರ್ಜಿಯನ್ನು ವಜಾಗೊಳಿಸಿದ್ದು, ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಆತನ ವಿರುದ್ಧ ಕಾನೂನು ಪ್ರಕಾರ ಬಂಧನ ಮತ್ತು ಹಣ ವಸೂಲಾತಿ ಕ್ರಮಗಳನ್ನು ಮುಂದುವರೆಸಬಹುದು ಎನ್ನಲಾಗಿದೆ.

















